ಚಿಕ್ಕಮಗಳೂರು: ಬಸ್ ತಂಗುದಾಣದ ಗೋಡೆಯ ಮೇಲೆ ಮನಸ್ಸೋಇಚ್ಛೆ ಗೀಚಿದ್ದ ವ್ಯಕ್ತಿಯ ಕೈನಲ್ಲೇ ಸುಣ್ಣ-ಬಣ್ಣ ಮಾಡಿಸಿದ ಘಟನೆ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ.
ಮಂಡ್ಯ ಮೂಲದ ವ್ಯಕ್ತಿಯೋರ್ವ ಇತ್ತೀಚೆಗಷ್ಟೇ ದುರಸ್ತಿಯಾಗಿ ಸುಣ್ಣ-ಬಣ್ಣ ಕಂಡಿದ್ದ ಜಿಲ್ಲೆಯ ಮೂಡಿಗೆರೆ ತಾಲೂಕಿನ ನಿಡುವಾಳೆ, ಬಾಳೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಮರ್ಕಲ್ ಗ್ರಾಮದ ಬಸ್ ನಿಲ್ದಾಣಕ್ಕೆ ಮಣ್ಣಿನಿಂದ ಅವನ ಪ್ರೇಯಸಿ ಹೆಸರು, ಲವ್ ಸಿಂಬಲ್, ಅವನು ಊರಿನ ಹೆಸರು, ಮೊಬೈಲ್ ನಂಬರ್, ಸ್ನೇಹಿತರ ಹೆಸರು ಬರೆದು ಇಡೀ ಬಸ್ ತಂಗುದಾಣವನ್ನು ಹಾಳು ಮಾಡಿದ್ದ. ಶಾಲಾ-ಕಾಲೇಜಿಗೆ ಹೋಗುವ ಮಕ್ಕಳು, ಮಹಿಳೆಯರು ಇದನ್ನ ನೋಡಿ ಇರುಸು-ಮುರುಸಿಗೊಳಗಾಗುತ್ತಿದ್ದರು.
ಇದನ್ನ ಗಮನಿಸಿದ ನಿಡುವಾಳೆ ಗ್ರಾಮ ಪಂಚಾಯತ್ ಸದಸ್ಯ ನವೀನ್, ನಿಡುವಾಳೆ ಗ್ರಾಮ ಪಂಚಾಯತ್ ಗ್ರಾಮಸ್ಥರು ಬಾಳೂರು ಪೊಲೀಸ್ ಠಾಣೆಗೆ ದೂರು ನೀಡಿದ್ದರು. ದೂರು ದಾಖಲಿಸಿಕೊಂಡ ಬಾಳೂರು ಪೊಲೀಸರು ಮಂಡ್ಯದ ವ್ಯಕ್ತಿಯನ್ನ ಹುಡುಕಿ ಕರೆತಂದು ಪೊಲೀಸ್ ಭಾಷೆಯಲ್ಲಿ ಬುದ್ಧಿ ಹೇಳಿದ್ದಾರೆ. ತನ್ನ ತಪ್ಪನ್ನ ಒಪ್ಪಿಕೊಂಡ ವ್ಯಕ್ತಿ ತಾನು ಹಾಳು ಮಾಡಿದ್ದ ಬಸ್ ನಿಲ್ದಾಣಕ್ಕೆ ತಾನೇ ಪುನಃ ಸುಣ್ಣ-ಬಣ್ಣ ಬಳಿದಿದ್ದಾನೆ. ಬಳಿಕ ಇನ್ಮುಂದೆ ಹೀಗೆ ಮಾಡುವುದಿಲ್ಲ ಎಂದು ತನ್ನ ತಪ್ಪಿಗೆ ಕ್ಷಮೆ ಕೇಳಿದ್ದಾನೆ.
ಗ್ರಾಮ ಪಂಚಾಯ್ ಸದಸ್ಯ ನವೀನ್ ತನ್ನ ಆರು ತಿಂಗಳ ಸಂಬಳದಲ್ಲಿ ಈ ಬಸ್ ನಿಲ್ದಾಣವನ್ನ ದುರಸ್ತಿ ಮಾಡಿದ್ದರು. ಸಂಪೂರ್ಣ ಹಾಳಾಗಿದ್ದ ಈ ಬಸ್ ನಿಲ್ದಾಣ ಮತ್ತೆ ಮೊದಲಿನಂತೆ ನಳನಳಿಸಲು ಬಾಳೂರು ಪೊಲೀಸರ ಶ್ರಮವೂ ಇತ್ತು. ಬಸ್ ನಿಲ್ದಾಣವನ್ನ ಹಾಳು ಮಾಡಿದ್ದ ಮಂಡ್ಯದ ಸಾಗರ್ ಎಂಬ ಯುವಕನನ್ನ ಹುಡುಕಿ ಕರೆತಂದ ಬಾಳೂರು ಪಿಎಸ್ಐ ರೇಣುಕಾ ಅವರಿಗೆ ನಿಡುವಾಳೆ ಗ್ರಾಮಸ್ಥರು ಅಭಿನಂದನೆ ಸಲ್ಲಿಸಿದ್ದಾರೆ.
ಇದೊಂದು ಉದಾಹರಣೆ ಅಷ್ಟೆ. ಆದರೆ, ಸಾರ್ವಜನಿಕ ಆಸ್ತಿಗಳಾದ ಶೌಚಾಲಯ, ಬಸ್ ನಿಲ್ದಾಣ, ಅಂಗನವಾಡಿ, ಆಸ್ಪತ್ರೆ ಕಟ್ಟಡ, ಬಸ್ ನಿಲ್ದಾಣದ ಶೌಚಾಲಯದಲ್ಲಿ ಅವಾಚ್ಯ ಪದಗಳನ್ನ ಬರೆಯುವ ಪುಂಡ-ಪೋಕರಿಗಳಿಗೆ ಇದೊಂದು ಪಾಠವಾಗಬೇಕು. ಸಾರ್ವಜನಿಕ ಆಸ್ತಿಯನ್ನ ಹಾಳು ಮಾಡುವ ಮುನ್ನ ಪ್ರತಿಯೊಬ್ಬರು ಎಚ್ಚೆತ್ತುಕೊಳ್ಳಬೇಕು. ಹೀಗೆ ಬರೆಯುವ ಪುಂಡರಿಗೆ ಇದೊಂದು ಎಚ್ಚರಿಕೆಯ ಗಂಟೆಯಾಗಬೇಕು ಎಂದು ನಿಡುವಾಳೆ ಗ್ರಾಮಸ್ಥರು ಹೇಳಿದ್ದಾರೆ.