ಚಿಕ್ಕಮಗಳೂರು : ಹಸುವಿಗೆ ತಾಯಿಯ ಸ್ಥಾನ ನೀಡಲಾಗಿದೆ. ಇಲ್ಲೊಂದು ಕುಟುಂಬ ಮಗಳ ನಿಶ್ಚಿತಾರ್ಥದ ಊಟಕ್ಕೆಂದು ಮನೆಯಲ್ಲಿ ಸಾಕಿದ್ದ ಹಸುವನ್ನೇ ಕಡಿದು ವಿಕೃತಿ ಮೆರೆದಿದೆ.
ನಿಶ್ಚಿತಾರ್ಥಕ್ಕೆಂದು ಬರುವ ಬಂಧುಗಳಿಗೆ ಉತ್ತಮ ಭೋಜನ ಕೂಟ ಏರ್ಪಾಟು ಮಾಡುವುದು ಸಹಜ. ಒಂದೊಂದು ಕಡೆ ಒಂದೊಂದು ರೀತಿಯ ಆಹಾರವನ್ನು ತಯಾರಿಸುತ್ತಾರೆ. ಆದರೆ ಮನೆಯಲ್ಲಿ ಸಾಕಿರುವ ಹಸುವನ್ನೇ ಕೊಂದು ಊಟ ತಯಾರಿಸಿದಂತಹ ಅಮಾನವೀಯ ಪ್ರಕರಣವೊಂದು ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ.
ಎನ್ಆರ್ ಪುರ ತಾಲೂಕಿನ ಈಚಿಕೆರೆ ಗ್ರಾಮದ ರೋಷನ್ ಎಂಬುವರ ಮನೆಯಲ್ಲಿ ನಿಶ್ಚಿತಾರ್ಥ ಕಾರ್ಯಕ್ರಮದ ಊಟಕ್ಕೆಂದು ಮನೆಯಲ್ಲಿ ಸಾಕಿದ್ದ ಹಸುವನ್ನೇ ಬಲಿ ಕೊಟ್ಟಿದ್ದಾರೆ. ಮಗಳ ನಿಶ್ಚಿತಾರ್ಥಕ್ಕೆ ಬಂದವರಿಗೆ ಮನೆಯಲ್ಲಿ ಸಾಕಿದ್ದ ಹಸುವಿನ ಮಾಂಸ ಬಡಿಸಲಾಗುತ್ತಿದೆ ಎಂಬ ವಿಷಯ ತಿಳಿದ ಎನ್ಆರ್ ಪುರ ಪೊಲೀಸರು ದಾಳಿ ಮಾಡಿದ್ದಾರೆ. ಹಸುವನ್ನು ಕಡಿದು ಮಾಂಸ ಬೇರ್ಪಡಿಸುವಾಗ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಅಲ್ಲದೇ ಇಬ್ಬರು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಇನ್ನು, ಈ ಪ್ರಕರಣದಲ್ಲಿ ತಲೆಮರೆಸಿಕೊಂಡಿರುವ ಇನ್ನೂ ಮೂವರು ಅರೋಪಿಗಳಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ. ಕರ್ನಾಟಕ ಜಾನುವಾರ ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಕಾಯ್ದೆ 2020 ಈಗಾಗಲೇ ರಾಜ್ಯದಲ್ಲಿ ಜಾರಿಯಾಗಿದೆ. ಜಾನುವಾರ ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಕಾಯ್ದೆ ಪ್ರಕಾರ, ಕರ್ನಾಟಕದಲ್ಲಿ ಯಾವುದೇ ವ್ಯಕ್ತಿ ಜಾನುವಾರು ಹತ್ಯೆ ಮಾಡಲು ಅಥವಾ ಹತ್ಯೆ ನಡೆಸುವವರಿಗೆ ಮಾರಾಟ ಮಾಡಲು ಅವಕಾಶವಿಲ್ಲ.
ಕಾಯ್ದೆ ಜಾರಿಯ ಪರಿಣಾಮವಾಗಿ ರಾಜ್ಯ ಹಾಗೂ ಹೊರ ರಾಜ್ಯಕ್ಕೆ ಜಾನುವಾರು ಅಕ್ರಮ ಸಾಗಾಣಿಕೆಯ ಮೇಲೂ ನಿರ್ಬಂಧ ಬಿದ್ದಿದೆ. ಆದರೆ ಕೃಷಿ ಹಾಗೂ ಪಶುಸಂಗೋಪನೆ ಕಾರಣಕ್ಕಾಗಿ ಸಾಗಣಿಕೆ ಮಾಡಲು ಅವಕಾಶ ನೀಡಲಾಗಿದೆ. ಹೀಗಿದ್ದರೂ ಅಕ್ರಮ ಗೋಸಾಗಣೆ ಹಾಗೂ ಹತ್ಯೆ ಪ್ರಕರಣಗಳು ರಾಜ್ಯದಲ್ಲಿ ನಡೆಯುತ್ತಿರುವುದು ವಿಪರ್ಯಾಸ.