ಚಿಕ್ಕಮಗಳೂರು: ಸಪೆಕ್ ಟೆಕ್ರಾ ಅನ್ನೋ ಹೆಸರಿನ ಕ್ರೀಡೆ ಹಲವರಿಗೆ ತಿಳಿದಿಲ್ಲ. ಇದು ಅಂತರಾಷ್ಟ್ರೀಯ ಮಟ್ಟದ ಕ್ರೀಡೆಯಾಗಿದ್ದು, ಇದರಲ್ಲಿ ಭಾರತವನ್ನ ಪ್ರತಿನಿಧಿಸಿದ ಸಿಂಧು ಕಂಚಿನ ಪದಕ ಗೆಲ್ಲುವ ಮೂಲಕ ದೇಶಕ್ಕೆ ಕೀರ್ತಿ ತಂದಿದ್ದಾರೆ.
ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನ ಕೋಡಿಕ್ಯಾಂಪ್ ನಿವಾಸಿಯಾದ ಸಿಂಧು, ಬಿ.ಕಾಂ ವ್ಯಾಸಂಗ ಮಾಡುತ್ತಿದ್ದಾರೆ. ಈಕೆಯ ಗುರುಗಳ ಸಲಹೆ ಮೇರೆಗೆ 3 ವರ್ಷದಿಂದ ತರಬೇತಿ ಪಡೆಯುತ್ತಿದ್ದಾರೆ. ಕೆಲ ದಿನಗಳ ಹಿಂದೆ ಚೀನಾದಲ್ಲಿ ನಡೆದ ಅಂತಾರಾಷ್ಟ್ರೀಯ ಮಟ್ಟದ ಸಪೆಕ್ ಟೆಕ್ರಾ ಕ್ರೀಡೆಯಲ್ಲಿ 18 ದೇಶದ ಆಟಗಾರರೊಂದಿಗೆ ಸೆಣಸಾಡಿ ಕಂಚಿನ ಪದಕ ಗೆಲ್ಲುವ ಮೂಲಕ ದೇಶಕ್ಕೆ ಮತ್ತು ಊರಿಗೆ ಕೀರ್ತಿ ತಂದಿದ್ದಾಳೆ.
ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತವನ್ನು ಪ್ರತಿನಿಧಿಸಿರೋ ಸಿಂಧುಗೆ ಮೂರು ವರ್ಷದ ಹಿಂದೆ ಈ ಆಟ ಗಂಧಗಾಳಿ ತಿಳಿದಿರಲಿಲ್ಲ. ಕಾಲೇಜಿನ ಶಿಕ್ಷಕರ ಮಾರ್ಗದರ್ಶನದಲ್ಲಿ ಆಟವನ್ನು ಕರಗತ ಮಾಡಿಕೊಂಡಿದ್ದ ಸಿಂಧು ಮಧ್ಯಮ ವರ್ಗದ ಕುಟುಂಬದ ಯುವತಿಯಾಗಿದ್ದರೂ ಆಕೆಯ ತಂದೆ ಮಗಳ ಆಸೆಗೆ ಬೆನ್ನೆಲುಬಾಗಿ ನಿಂತು ಸಾಧನೆ ಮಾಡಲು ಕಷ್ಟಪಟ್ಟು ಧಾರವಾಡ, ದಾವಣಗೆರೆಯಲ್ಲಿ ಕೋಚಿಂಗ್ ಕೊಡಿಸಿದ್ದಾರೆ.
ಯಾವುದೀ ಆಟ:
ಸಪೆಕ್ ಟೆಕ್ರಾ ವಾಲಿಬಾಲ್ ಆಟದ ರೀತಿಯಲ್ಲಿ ಕೋರ್ಟ್‍ನಲ್ಲಿ ಐವರು ಕ್ರೀಡಾ ಪಟುಗಳು ತಲೆ ಹಾಗೂ ಕಾಲಿನಿಂದ ಆಡುವ ಆಟ. ಒಂದು ವೇಳೆ ಕೈಯಲ್ಲಿ ಮುಟ್ಟಿದರೆ ಆ ಕ್ರೀಡಾಪಟು ಔಟಾಗುತ್ತಾರೆ. ವಾಲಿಬಾಲ್‍ನಲ್ಲಿ ಕೈಯಲ್ಲಿ ಸ್ಮ್ಯಾಷ್ ಹೊಡೆಯುವಂತೆ ಇದರಲ್ಲಿ ಫೈಬರ್ ಬಾಲನ್ನು ಕಾಲಲ್ಲಿ ಸ್ಮ್ಯಾಷ್ ಹೊಡಿಯುತ್ತಾರೆ. ತಲೆಯಲ್ಲಿ ಹೆಚ್ಚು ತಾಕತ್ತು ಹಾಗೂ ದೇಹವನ್ನು ಸಲೀಸಾಗಿ ಬೆಂಡ್ ಮಾಡುವವರು ಮಾತ್ರ ಈ ಆಟ ಆಡಲು ಸಾಧ್ಯ.
ನಿರಂತರ ಪರಿಶ್ರಮದಿಂದ ರಾಜ್ಯ-ರಾಷ್ಟ್ರಮಟ್ಟದಲ್ಲಿ ಉತ್ತಮ ಪ್ರದರ್ಶನ ನೀಡಿದ ಹಿನ್ನೆಲೆ ಅಂತಾರಾಷ್ಟ್ರೀಯ ಮಟ್ಟಕ್ಕೆ ಆಯ್ಕೆಯಾದ ಏಕೈಕ ಕನ್ನಡತಿಯಾಗಿದ್ದಾಳೆ. ಕಂಚಿನ ಪದಕ ಗೆದ್ದಿರೋ ಸಿಂಧುಗೆ ಬಂಗಾರ ಗೆಲ್ಲಬೇಕೆಂಬ ಕನಸು ಕಂಡಿದ್ದು, ಬಂಗಾರ ಗೆದ್ದೇ ಗೆಲ್ಲುತ್ತೇನೆ ಅನ್ನೋ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಒಟ್ಟಾರೆಯಾಗಿ ಮೂರೇ ವರ್ಷದ ತರಬೇತಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪದಕ ಗಳಿಸಿದ ಈಕೆಯ ಸಾಧನೆಯನ್ನ ಮೆಚ್ಚಲೇಬೇಕಾಗಿದೆ.