ಚಿಕ್ಕಮಗಳೂರು: ಜಿಲ್ಲೆಯಲ್ಲಿ ಇಂದು 8 ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಈ ಮೂಲಕ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 32ಕ್ಕೆ ಏರಿಕೆಯಾಗಿದೆ. 18 ಜನ ಸೋಂಕಿತರು ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ.
ಆದರೆ ಇಂದು ಮತ್ತೆ 8 ಕೊರೊನಾ ಪಾಸಿಟಿವ್ ಪ್ರಕರಣ ಪತ್ತೆಯಾಗಿದ್ದು, ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನಲ್ಲಿ ಒಂದು ಪ್ರಕರಣ ಪತ್ತೆಯಾದರೆ, ತರೀಕೆರೆ ತಾಲೂಕಿನಲ್ಲಿ ನಾಲ್ಕು, ಎನ್.ಆರ್.ಪುರ ತಾಲೂಕಿನಲ್ಲಿ 2, ಶೃಂಗೇರಿಯಲ್ಲಿ ಒಂದು ಪ್ರಕರಣ ದಾಖಲಾಗಿದೆ.
32 ವರ್ಷದ ಮಹಿಳೆ, 38 ವರ್ಷದ ಪುರುಷ, 54 ವರ್ಷದ ಪುರುಷ, 31 ವರ್ಷದ ಪುರುಷ, 47 ವರ್ಷದ ಪುರುಷ, 18 ವರ್ಷದ ಯುವಕ, 50 ವರ್ಷದ ಪುರುಷ, 25 ವರ್ಷದ ಪುರುಷ ಇವರಲ್ಲಿ ಸೋಂಕು ಪತ್ತೆಯಾಗಿದೆ.
ಮಹಾರಾಷ್ಟ್ರದಿಂದ ಕೊಪ್ಪ ತಾಲೂಕಿಗೆ ಬಂದ ಓರ್ವರಲ್ಲಿ ಸೋಂಕು ಕಾಣಿಸಿಕೊಂಡಿದ್ದರೆ, ತಮಿಳುನಾಡಿನಿಂದ ಎನ್.ಆರ್.ಪುರಕ್ಕೆ ಬಂದಿದ್ದ ಇಬ್ಬರಲ್ಲಿ ಸೋಂಕು ಪತ್ತೆಯಾಗಿದೆ.
ಕುವೈತ್ನಿಂದ ಶೃಂಗೇರಿಗೆ ಬಂದಿದ್ದ ಮಹಿಳೆಗೂ ಕೊರೊನಾ ಸೋಂಕು ತಗುಲಿರುವುದು ದೃಢವಾಗಿದೆ. ಆದರೆ ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕಿನ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ 4 ಜನ ಪೊಲೀಸ್ ಕಾನ್ಸ್ಟೇಬಲ್ಗಳಿಗೂ ಸೋಂಕು ತಗುಲಿದ್ದು, ಈ ನಾಲ್ಕು ಜನರಿಗೆ ಸೋಂಕು ಹೇಗೆ ತಗುಲಿದೆ ಎಂಬುದು ಇಲ್ಲಿವರೆಗೂ ತಿಳಿದು ಬಂದಿಲ್ಲ.
ಈ ಎಲ್ಲಾ ಸೋಂಕಿತರು ವಾಸ ಮಾಡುತ್ತಿದ್ದ ಏರಿಯಾಗಳನ್ನು ಪೊಲೀಸರು ಹಾಗೂ ಆರೋಗ್ಯ ಇಲಾಖೆ ಸೀಲ್ ಡೌನ್ ಮಾಡಿದ್ದು, ಕಟ್ಟೆಚ್ಚರ ವಹಿಸಲಾಗಿದೆ. ಜಿಲ್ಲಾ ಆರೋಗ್ಯ ಇಲಾಖೆ ಈ ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕಿತರನ್ನು ಪತ್ತೆ ಹಚ್ಚಲು ಮುಂದಾಗಿದೆ.
ಕೊರೊನಾ ಸೋಂಕಿತರನ್ನು ಜಿಲ್ಲಾ ಕೋವಿಡ್ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ. ಆದರೆ ತರೀಕೆರೆಯಲ್ಲಿ 4 ಜನ ಪೊಲೀಸ್ ಕಾನ್ಸ್ಟೇಬಲ್ಗಳಿಗೆ ಸೋಂಕು ತಗುಲಿರುವ ಹಿನ್ನೆಲೆ ಅವರು ಕರ್ತವ್ಯ ನಿರ್ವಹಿಸುತ್ತಿದ್ದ ಠಾಣೆಯನ್ನು ಜಿಲ್ಲಾಡಳಿತ ಸೀಲ್ ಡೌನ್ ಮಾಡುತ್ತಾ ಎಂಬುದನ್ನು ಕಾದು ನೋಡಬೇಕಿದೆ.