ಚಿಕ್ಕಮಗಳೂರು: ಅಂಗನವಾಡಿಗೆಂದು ತೆರಳಿದ ಆರು ವರ್ಷದ ಮಗು ವಾಪಾಸ್ ಮನೆಗೆ ಬಾರದ ಹಿನ್ನಲೆಯಲ್ಲಿ ಪೋಷಕರು ಮಗುವಿನ ಹುಡುಕಾಟ ನಡೆಸಿದ್ದು, ಮಗುವಿನ ಶವ ಕಾಫಿ ತೋಟದ ಕೆರೆಯಲ್ಲಿ ಪತ್ತೆಯಾದ ಘಟನೆ ಜಿಲ್ಲೆಯ ಮೂಡಿಗೆರೆ ತಾಲೂಕಿನ ಮಾಕೋನಹಳ್ಳಿ ಕಾಫಿ ತೋಟದಲ್ಲಿ ನಡೆದಿದೆ.
ನಿನ್ನೆ ಅಂಗನವಾಡಿ ಹೋಗಿದ್ದ ಮಗು ಪ್ರಿತಂ (6) ವಾಪಾಸ್ ಮನೆಗೆ ಬಾರದ ಹಿನ್ನಲೆ ಪೋಷಕರು ಮಗುವಿನ ಹುಡುಕಾಟ ನಡೆಸುತ್ತಿರುವಾಗ ಮಗುವಿನ ಶವ ಕಾಫಿ ತೋಟದ ಕೆರೆಯಲ್ಲಿ ಪತ್ತೆಯಾಗಿದೆ. ಕಾಫಿ ತೋಟದ ಲೈನ್ ಮನೆಯಲ್ಲಿ ವಾಸವಿದ್ದ ಕಾರ್ಮಿಕರ ದಂಪತಿಗಳ ಮಗು ಇದಾಗಿದ್ದು, ಸದ್ಯ ಮೂಡಿಗೆರೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.
ನಿಜಕ್ಕೂ ಮಗು ಕಾಲು ಜಾರಿ ಕೆರೆಗೆ ಬಿದ್ದು ಸಾವನಪ್ಪಿದೆಯೇ ಅಥವಾ ಬೇರೆ ರೀತಿ ಏನಾದರೂ ಅವಘಡ ನಡೆಯಿತಾ ಎಂಬುದನ್ನು ಪೊಲೀಸರು ತನಿಖೆ ನಡೆಸುತ್ತಿದ್ದು, ಸಂಪೂರ್ಣ ತನಿಖೆಯ ನಂತರವೇ ಸತ್ಯಾಂಶ ಹೊರಬೀಳಬೇಕಿದೆ. ಸದ್ಯ ಈ ಕುರಿತು ಮೂಡಿಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.