ಚಿಕ್ಕಮಗಳೂರು : ಅಬ್ಬಿ ಜಲಪಾತ ವೀಕ್ಷಣೆಗಾಗಿ ಬಂದಾಗ 5 ವರ್ಷದ ಮಗುವೊಂದು ಜಾರಿ ಬಿದ್ದ ಪರಿಣಾಮ ಅದರ ಮುಖ ಮತ್ತು ತಲೆ ಗಂಭೀರವಾಗಿ ಗಾಯಗೊಂಡಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ನಡೆದಿದೆ.
ಶ್ರೇಯಾ (5) ಎಂಬ ಬಾಲಕಿ ಗಂಭೀರವಾಗಿ ಗಾಯಗೊಂಡಿದೆ. ಬೆಂಗಳೂರಿನಿಂದ ಜಲಪಾತ ವೀಕ್ಷಣೆಗಾಗಿ ಒಂದೇ ಕುಟುಂಬದ 17 ಮಂದಿ ಆಗಮಿಸಿದ್ದರು. ಚಾರಣಿಗರು ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕು ಬಾಳೂರು ಬಳ್ಳಾಲ ರಾಯನದುರ್ಗ ಕಡೆಯಿಂದ ಅಬ್ಬಿ ಜಲಪಾತದ ಕಡೆ ಬಂದಿದ್ದರು.
ಈ ವೇಳೆ ಜೊತೆಯಲ್ಲಿದ್ದ ಐದು ವರ್ಷದ ಮಗು ಶ್ರೇಯಾ ಪಾಚಿಗಟ್ಟಿದ ಕಲ್ಲಿನ ಮೇಲಿಂದ ಅಲ್ಪ ಆಳಕ್ಕೆ ಜಾರಿ ಬಿದ್ದಿದ್ದಾಳೆ. ತಕ್ಷಣ ಮಗುವನ್ನು ಕುಟುಂಬಸ್ಥರೇ ರಕ್ಷಣೆ ಮಾಡಿ, ಕಾಲ್ನಡಿಗೆ ದಾರಿ ಮೂಲಕ ತೆರಳಿ ನಂತರ ಮಗುವನ್ನು ತಮ್ಮ ವಾಹನದಲ್ಲಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ.
ಘಟನೆಯಲ್ಲಿ ಮಗುವಿನ ಮುಖ, ತಲೆಗೆ ಹೆಚ್ಚಿನ ಗಾಯವಾಗಿದೆ. ಮೈಮೇಲೆ ತರಚಿದ ಗಾಯಗಳಾಗಿವೆ. ವಿಷಯ ತಿಳಿದು ಸ್ಥಳಕ್ಕೆ ಬೆಳ್ತಂಗಡಿಯ ಅಗ್ನಿಶಾಮಕ ದಳ ಹಾಗೂ ಬೆಳ್ತಂಗಡಿ ಠಾಣೆಯ ಪೊಲೀಸರು ಭೇಟಿ ನೀಡಿದ್ದರು. ಆದರೆ, ಅಷ್ಟರೊಳಗೆ ಮಗುವಿನ ಕುಟುಂಬದವರು ಬಾಳೂರು ಭಾಗವಾಗಿ ವಾಪಸ್ಸಾಗಿದ್ದಾರೆ.