ಚಿಕ್ಕಮಗಳೂರು: ಅಕ್ರಮವಾಗಿ ಕಾರಿನಲ್ಲಿ ಗಾಂಜಾ ಸಾಗಣೆ ಮಾಡುವ ವೇಳೆ ಪೊಲೀಸರು ದಾಳಿ ಮಾಡಿ ನಾಲ್ಕು ಜನ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ನಿಖಿಲ್, ಸಂಜಯ್, ಭರತ್, ದೀಪಕ್ ಬಂಧಿತ ಆರೋಪಿಗಳು. ನಗರದಿಂದ ತರೀಕೆರೆ ಕಡೆಗೆ ಲಿಂಗದಹಳ್ಳಿ ಮಾರ್ಗವಾಗಿ ಕಾರಿನಲ್ಲಿ ಆರು ಜನ ಆರೋಪಿಗಳು ಗಾಂಜಾ ಮಾರಾಟ ಮಾಡಲು ಹೋಗುತ್ತಿದ್ದ ವೇಳೆ ಲಿಂಗದಹಳ್ಳಿ ಪೊಲೀಸರು ದಾಳಿ ಮಾಡಿದ್ದು, ನಾಲ್ವರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ. ದಾಳಿ ವೇಳೆ, ಆನಂದ್ ಮತ್ತು ಗಂಗಾ ಎಂಬ ಇಬ್ಬರು ಆರೋಪಿಗಳು ತಪ್ಪಿಸಿಕೊಂಡಿದ್ದಾರೆ.
ಲಿಂಗದಹಳ್ಳಿ ಸಮೀಪದ ಉಡೇವಾ ಗ್ರಾಮದ ಶ್ರೀ ರಂಗನಾಥ ಸ್ವಾಮಿ ದೇವಸ್ಥಾನದ ಬಳಿ ಕಾರಿನಲ್ಲಿ ಈ ಆರೋಪಿಗಳು ಹೋಗುತ್ತಿದ್ದ ವೇಳೆ ಸ್ಥಳೀಯರ ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿದ್ದಾರೆ. ಆರೋಪಿಗಳಿಂದ ಸುಮಾರು 8.504 ಕೆಜಿ ಗಾಂಜಾ ಸೊಪ್ಪು ಹಾಗೂ ಒಂದು ಕಾರನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಲಿಂಗದಹಳ್ಳಿ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಿಸಿಕೊಂಡು ತಲೆಮರೆಸಿಕೊಂಡಿರುವ ಇಬ್ಬರು ಆರೋಪಿಗಳಿಗಾಗಿ ಬಲೆ ಬೀಸಿದ್ದಾರೆ.