ಚಿಕ್ಕಮಗಳೂರು: ಆ ಮನೆಯವರೆಲ್ಲರೂ ಪಕ್ಕದ ಜಿಲ್ಲೆಯಲ್ಲಿ ಮನೆಯ ಮಗಳ ಮದುವೆ ಇದ್ದ ಕಾರಣ ಎಲ್ಲರೂ ಮನೆ ಬಿಟ್ಟು ಹೋಗಿದ್ದರು. ಇದನ್ನ ಅರಿತ ಖತರ್ನಾಕ್ ಕಳ್ಳರ ಗ್ಯಾಂಗ್, ಇಡೀ ಮನೆಯನ್ನೇ ಲೂಟಿ ಮಾಡಿದೆ. ಬರೋಬ್ಬರಿ ಒಂದೂವರೇ ಕೋಟಿಗೂ ಅಧಿಕ ಚಿನ್ನಾಭರಣ ದೋಚಿ ಪರಾರಿಯಾಗಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.
ಚಿಕ್ಕಮಗಳೂರು ನಗರದ ರತ್ನಗಿರಿ ರಸ್ತೆ ಕಿರಣ್ ಬೇಕರಿ ಸಮೀಪ ಇತ್ತೀಚೆಗಷ್ಟೇ ನಿರ್ಮಾಣವಾಗಿದ್ದ ಹೊಸ ಮನೆಯಲ್ಲಿ ಕಳ್ಳರು ಕೈಚಳಕ ಮಾಡಿದ್ದಾರೆ. ಅಕ್ಟೋಬರ್ 27 ರಂದು ಸುರೇಶ್ ಕುಮಾರ್ ಕುಟುಂಬ ಮಗಳ ಮದುವೆಗಾಗಿ ಹಾಸನಕ್ಕೆ ಪ್ರಯಾಣ ಬೆಳೆಸಿತ್ತು. ಮನೆಗೆ ಬೀಗ ಹಾಕಿ ಎಲ್ಲರೂ ಮದುವೆಗೆಂದು ಹಾಸನಕ್ಕೆ ಹೋಗಿದ್ದರು. ಇದನ್ನೇ ಹೊಂಚು ಹಾಕಿ ಕುಳಿತಿದ್ದ ಕಳ್ಳರ ಗ್ಯಾಂಗ್, ಆ ದಿನ ರಾತ್ರಿ ಮನೆಯ ಹಿಂದಿನ ಚರಂಡಿ ಮೂಲಕ ಮನೆಯ ಹಿಂದಿನ ಬಾಗಿಲು ಒಡೆದು ಎಂಟ್ರಿಯಾಗಿದ್ದಾರೆ. ಬಾಲ್ಕನಿಯಿಂದ ಮನೆಯ ಒಳಗೆ ಪ್ರವೇಶಿಸಿ, ಮನೆಯಲ್ಲಿದ್ದ ಬರೋಬ್ಬರಿ 3 ಕೆಜಿಗೂ ಅಧಿಕ ಚಿನ್ನ, 30 ಕೆಜಿಗೂ ಅಧಿಕ ಬೆಳ್ಳಿ. ಅಂದರೆ ಎರಡೂವರೆ ಕೋಟಿಗೂ ಅಧಿಕ ಮೌಲ್ಯದ ಚಿನ್ನಾಭರಣವನ್ನ ತುಂಬಿಕೊಂಡಿದ್ದಾರೆ. ಮೂಲದ ಪ್ರಕಾರ ಚಿನ್ನಾಭರಣವನ್ನ ಒಮ್ಮೆಲ್ಲೇ ತೆಗೆದುಕೊಂಡು ಹೋಗಲಾಗದೇ ಮನೆಯಲ್ಲೆಲ್ಲಾ ಬೀಳಿಸಿಕೊಂಡು ಹೋಗಿದ್ದಾರೆ. ಇನ್ನು ಮದುವೆ ಮುಗಿಸಿಕೊಂಡ ಬಂದ ಕುಟುಂಬಕ್ಕೆ ಮನೆಯ ಚಿತ್ರಣವನ್ನ ನೋಡಿ ಬರ ಸಿಡಿಲು ಬಡಿದಂತಾಗಿದೆ.
ಈ ಕುಟುಂಬ ಇಷ್ಟು ಪ್ರಮಾಣದ ಚಿನ್ನಾಭರಣ ಮನೆಯಲ್ಲಿ ಇಡೋಕೆ ಕಾರಣವೂ ಇದೆ. ಮನೆಯ ಯಜಮಾನ ಸುರೇಶ್ ಕುಮಾರ್, ನಗರದ ಎಂ ಜಿ ರಸ್ತೆಯಲ್ಲಿ ಸ್ವರ್ಣಾಂಜಲಿ ಎನ್ನುವ ಜ್ಯುವೆಲ್ಲರಿ ಅಂಗಡಿ ನಡೆಸುತ್ತಿದ್ದರು. ಕೊರೊನಾ ಲಾಕ್ ಡೌನ್ ಹಿನ್ನೆಲೆಯಲ್ಲಿ ವ್ಯಾಪಾರದಲ್ಲಿ ನಷ್ಟ ಆದ ಹಿನ್ನೆಲೆ, ಜ್ಯುವೆಲರಿ ಶಾಪ್ ಕ್ಲೋಸ್ ಮಾಡಿದ್ದರು. ಸದ್ಯ ಆ ಜಾಗದಲ್ಲಿ ಶ್ರೀಕಂಠೇಶ್ವರ ಎಲೆಕ್ಟ್ರಾನಿಕ್ ಮಳಿಗೆ ಇದ್ದು, ಶಾಪ್ ಬಂದ್ ಮಾಡಿದ ಹಿನ್ನೆಲೆಯಲ್ಲಿ ಚಿನ್ನಾಭರಣವನ್ನ ಮನೆಯಲ್ಲೇ ಇಟ್ಟುಕೊಂಡಿದ್ದರು. ಒಂದೂವರೆ ತಿಂಗಳ ಹಿಂದೆಯಷ್ಟೇ ಹೊಸ ಮನೆಗೆ ಕಾಲಿರಿಸಿದ ಕುಟುಂಬ, ಲಾಕರ್ನಲ್ಲಿ ಚಿನ್ನಾಭರಣವನ್ನ ಜೋಪಾನ ಮಾಡಿಟ್ಟಿದ್ದರು. ಆದರೆ ಈ ಚಿನ್ನದ ಗಂಟಿಗೆ, ಕಳ್ಳರು ಕಣ್ಣು ಹಾಕುತ್ತಾರೆ ಅಂತಾ ಕನಸು ಮನಸ್ಸಿನಲ್ಲಿಯೂ ಯೋಚನೆ ಮಾಡಿರಲಿಲ್ಲ.
ಕಳೆದ ರಾತ್ರಿ ಕೂಡ ಅಬಕಾರಿ ಇಲಾಖೆ ಸಿಬ್ಬಂದಿಯಾಗಿರೋ ವಿಜಯ ಎಂಬುವರ ಕಲ್ಯಾಣನಗರದ ಮನೆಗೆ ನುಗ್ಗಿ ಖದೀಮರು 6 ಲಕ್ಷ ಮೌಲ್ಯದ ಚಿನ್ನಾಭರಣ ದೋಚಿದ್ದಾರೆ. ಚಿಕ್ಕಮಗಳೂರು ನಗರದಲ್ಲೇ ನಡೀತಿರೋ ಪ್ರಕರಣಗಳನ್ನ ನೋಡಿದರೇ ಕಳ್ಳರಿಗೆ ಪೊಲೀಸರ ಭಯವೇ ಇಲ್ಲವೆನೋ ಅನಿಸುತ್ತಿದೆ.