ಬಾಗೇಪಲ್ಲಿ: ತಾನು ಮದುವೆಯಾಗಿದ್ದ ಯುವತಿಗೆ ಆಕೆಯ ಮನೆಯವರು ಬೇರೆ ಯುವಕನ ಜೊತೆ ಮರು ಮದುವೆ ಮಾಡಿದ್ದರಿಂದ ನೊಂದ ಯುವಕ ಟವರ್ ಏರಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆ ಬಾಗೇಪಲ್ಲಿ ತಾಲೂಕಿನ ಕೋಡಪಲ್ಲಿಯಲ್ಲಿ ನಡೆದಿದೆ.
ಶ್ರೀಕಾಂತ್ (24) ಆತ್ಮಹತ್ಯೆಗೆ ಯತ್ನಿಸಿದ ಯುವಕ. ಶ್ರೀಕಾಂತ್ ಪರಿಶಿಷ್ಟ ಜಾತಿಯವನಾಗಿದ್ದು, ಬಲಿಜ ಸಮುದಾಯದ ಯುವತಿಯನ್ನು ಪ್ರೀತಿಸಿ ಮದುವೆಯಾಗಿದ್ದ ಎನ್ನಲಾಗಿದೆ. ಈಗ ತನ್ನ ಪತ್ನಿ ಬೇರೊಬ್ಬರನ್ನು ವಿವಾಹವಾಗಿರುವುದಕ್ಕೆ ಮನನೊಂದು ಶ್ರೀಕಾಂತ್ ಮದ್ಯ ಸೇವಿಸಿ ಭಾನುವಾರ ಸಂಜೆ 4 ಗಂಟೆಗೆ ಟವರ್ ಏರಿ ನನ್ನ ಪತ್ನಿಯನ್ನು ಕರೆಸಿರಿ ಇಲ್ಲದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುವೆ ಎಂದು ಬೆದರಿಕೆ ಹಾಕಿದ್ದಾನೆ.
ಸ್ಥಳಕ್ಕೆ ಬಾಗೇಪಲ್ಲಿ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಹಾಗೂ ಅಗ್ನಿ ಶಾಮಕ ದಳದ ಸಿಬ್ಬಂದಿ ಆಗಮಿಸಿದ್ದು, ಆತನ ಮನವೊಲಿಸಿದ ನಂತರ ರಾತ್ರಿ 11 ಗಂಟೆಯಲ್ಲಿ ಟವರ್ನಿಂದ ಕೆಳಗೆ ಇಳಿದಿದ್ದಾನೆ.