ಚಿಕ್ಕಬಳ್ಳಾಪುರ: ಸ್ಥಳೀಯ ಚುನಾವಣೆಯಲ್ಲಿ ಗೆದ್ದ ಅಭ್ಯರ್ಥಿ ಕಡೆಯವರು ಖುಷಿಯಲ್ಲಿ ಗರ್ಭಿಣಿವೋರ್ವಳ ಮೇಲೆ ಕೈಮಾಡಿದ್ದಾರೆ ಎಂಬ ಆರೋಪ ಪ್ರಕರಣ ಜಿಲ್ಲೆಯ ಶಿಡ್ಲಘಟ್ಟ ನಗರದಲ್ಲಿ ನಡೆದಿದೆ.
ಇಂದು ನಗರಸಭೆ ಚುನಾವಣೆಯ ಫಲಿತಾಂಶದ ಪ್ರಕಟವಾದ ಬಳಿಕ ಗೆದ್ದವರು ಸಂಭ್ರಮದಿಂದ ಬೀಗುತ್ತಿದ್ದರೆ, ಸೋತವರು ನಿರಾಸೆಯಿಂದ ಹೋಗುತ್ತಿದ್ದರು. ಕೆಲ ಸೋತವರು ಗೆದ್ದವರ ಮೇಲೆ ಅಸಮಾಧಾನ ವ್ಯಕ್ತಪಡಿಸುತ್ತಿದ್ದರು. ಆದರೆ, ಗೆದ್ದ ಖುಷಿಯಲ್ಲಿ ಗರ್ಭಿಣಿ ಅನ್ನೋದನ್ನು ಲೆಕ್ಕಿಸದೇ ಕೆಲವರು ಮೃಗೀಯ ರೀತಿ ವರ್ತಿಸಿರುವುದು ಶಿಡ್ಲಘಟ್ಟ ನಗರದ ವಾರ್ಡ್ ನಂಬರ್ 24 ರಲ್ಲಿ ನಡೆದಿದೆ.
24 ನೇ ವಾರ್ಡ್ನಲ್ಲಿ ಜೆಡಿಎಸ್ನಲ್ಲಿ ಗೆದ್ದ ಮುಸ್ತರುನ್ನಿಸ್ ಕಡೆಯವರಾದ ಪೈರೋಜ್, ಅಪ್ರೋಜ್, ತೋಸಿಪ್ ಎಂಬುವರು, ಸೋತಿದ್ದ ನಗೀನಾ ಕೋಂ ಪಯಾಜ್ ಎಂಬ ಕಾಂಗ್ರೆಸ್ ಅಭ್ಯರ್ಥಿ ಕಡೆಯ ಗರ್ಭಿಣಿ ಮಹಿಳೆ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಘಟನೆಯಲ್ಲಿ 7 ಜನ ಗಾಯಗೊಂಡಿದ್ದು, ಶಿಡ್ಲಘಟ್ಟ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸದ್ಯ ನಗರ ಪೊಲೀಸರು ಬಿಗಿ ಬಂದೋಬಸ್ ಕೈಗೊಂಡಿದ್ದು, ತಪ್ಪಿತಸ್ಥರ ವಿರುದ್ದ ಸೂಕ್ತ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.