ಗುಡಿಬಂಡೆ: ಹೆಣ್ಣೊಂದು ಕಲಿತರೆ ಸಮಾಜ ಕಲಿತಂತೆ ಎಂಬಂತೆ ಸಮಾಜದ ಸರ್ವತೋಮುಖ ಅಭಿವೃದ್ದಿಯಲ್ಲಿ ಮಹಿಳೆಯ ಪಾತ್ರ ಅಪಾರವಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಆರ್.ಲತಾ ಹೇಳಿದರು.
ಗುಡಿಬಂಡೆ ಪಟ್ಟಣದ ಪದವಿ ಪೂರ್ವ ಕಾಲೇಜಿನ ಕ್ರೀಡಾಂಗಣದಲ್ಲಿ ತಾಲೂಕು ಆಡಳಿತದ ವತಿಯಿಂದ ಮಹಿಳಾ ದಿನಾಚರಣೆ ಅಂಗವಾಗಿ ವಿದ್ಯಾರ್ಥಿನಿಯರಿಗೆ ಆತ್ಮ ರಕ್ಷಣಾ ಕಲಿಕೆ ಹಾಗೂ ಬೃಹತ್ ಕರಾಟೆ ಪ್ರದರ್ಶನ ಕಾರ್ಯಕ್ರಮವನ್ನು ಜಿಲ್ಲಾಧಿಕಾರಿ ಡಾ.ಆರ್.ಲತಾ ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು, ನಮ್ಮ ಸಂಸ್ಕೃತಿಯಲ್ಲಿ ಹೆಣ್ಣಿಗೆ ಮಹತ್ತರವಾದ ಸ್ಥಾನ ನೀಡಲಾಗಿದೆ. ಆದರೆ, ಇಂದಿನ ದಿನಗಳಲ್ಲಿ ಮಹಿಳೆಯರ ಮೇಲೆ ನಡೆಯುವ ದೌರ್ಜನ್ಯಗಳು ನಮ್ಮ ಸಂಸ್ಕೃತಿಗೆ ಕೆಟ್ಟ ಹೆಸರು ತರುವಂತದ್ದಾಗಿದೆ. ಸಮಾಜದಲ್ಲಿ ಹೆಣ್ಣು ಅಬಲೆಯಲ್ಲ ಎಂಬುದನ್ನು ಸಾರಿ ಹೇಳಲು ಎಲ್ಲಾ ಹೆಣ್ಣು ಮಕ್ಕಳು ಶಿಕ್ಷಣವನ್ನು ಪಡೆಯಬೇಕೆಂದರು.
ಬಾಲ್ಯವಿವಾಹ ಎಂಬುದು ಸಾಮಾಜಿಕ ಪಿಡುಗಾಗಿದ್ದು, ಹದಿಹರೆಯದ ವಯಸ್ಸಿನಲ್ಲಿ ನಿಮ್ಮ ಪೋಷಕರು ಮದುವೆ ಮಾಡಲು ಒತ್ತಾಯಿಸಿದಲ್ಲಿ, ತಾವು 1098 ಸಂಖ್ಯೆಗೆ ಕರೆ ಮಾಡಿ ದೂರು ನೀಡಬಹುದು. ಬಾಲ್ಯ ವಿವಾಹಕ್ಕೆ ಮುಂದಾದ ಪೋಷಕರ ಮೇಲೂ ಸಹ ಕಾನೂನು ರೀತ್ಯ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದರು.
ಕಿರುಕುಳ ನೀಡಿದರೇ ದೂರು ನೀಡಿ:
ಸರ್ಕಾರ ಈಗಾಗಲೇ ಹೆಣ್ಣು ಮಕ್ಕಳ ರಕ್ಷಣೆಗೆ ಅನೇಕ ಕಾನೂನುಗಳನ್ನು ಜಾರಿಗೆ ತಂದಿದೆ. ಶಾಲಾ ಕಾಲೇಜುಗಳ ಬಳಿ, ಬಸ್ ನಿಲ್ದಾಣ, ಸಿನಿಮಾ ಅಥವಾ ಸಾರ್ವಜನಿಕ ಪ್ರದೇಶಗಳಲ್ಲಿ ಹೆಣ್ಣು ಮಕ್ಕಳಿಗೆ ಕಿರುಕುಳ ನೀಡಿದರೆ, ನಿಮ್ಮ ರಕ್ಷಣೆಗಾಗಿ ಓಬವ್ವ ಪಡೆ ಸಿದ್ದವಾಗಿರುತ್ತದೆ. ಅವರ ಬಳಿ ತೆರಳಿ ನಿರ್ಭಯವಾಗಿ ದೂರು ನೀಡಿ ಎಂದರು.