ಚಿಕ್ಕಬಳ್ಳಾಪುರ: ಒಂದು ವರ್ಷದಲ್ಲಿ ನಮ್ಮ ಬಿಜೆಪಿ ಸರ್ಕಾರ ಏನು ಸಾಧನೆ ಮಾಡಿದೆ ಎಂಬುದರ ಬಗ್ಗೆ ಒಂದು ಪುಸ್ತಕ ಬರೆಯುತ್ತಿದ್ದೇವೆ. ಅದನ್ನು ಉಗ್ರಪ್ಪ ಅವರಿಗೆ ಕಳುಹಿಸಿ ಕೊಡುತ್ತೇವೆ. ಸರ್ಕಾರದ ಸಾಧನೆ ಏನು ಎಂಬುವುದನ್ನು ಅವರು ತಿಳಿದುಕೊಳ್ಳಲಿ ಎಂದು ಆರೋಗ್ಯ ಸಚಿವ ಡಾ. ಕೆ ಸುಧಾಕರ್ ಹೇಳಿದರು.
ಚಿಕ್ಕಬಳ್ಳಾಪುರದಲ್ಲಿ ಕೆಪಿಸಿಸಿ ಉಪಾಧ್ಯಕ್ಷ ವಿ.ಎಸ್.ಉಗ್ರಪ್ಪ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಸಚಿವರು, ದೇಶದಲ್ಲಿ 200 ಕೋಟಿ ವ್ಯಾಕ್ಸಿನ್ ಕೊಟ್ಟಿದ್ದೇವೆ. ಇದನ್ನು ಕ್ರಾಂಗ್ರೆಸ್ ಮಾಡಿದೆಯಾ?. ಬಡವರನ್ನು ಕಾಂಗ್ರೆಸ್ ಬ್ಯಾಂಕ್ಗಳಿಂದ ಹೊರಗಿಟ್ಟಿತ್ತು. ಆದರೆ ಬಿಜೆಪಿ ಸರ್ಕಾರ ಎಲ್ಲಾ ರೈತರಿಗೆ ಬ್ಯಾಂಕ್ ಖಾತೆ ಮಾಡಿದೆ. ಒಬ್ಬ ವ್ಯಕ್ತಿಗೆ ಶಿಕ್ಷಣ, ಆರೋಗ್ಯ ಮೂಲಭೂತ ಸೌಕರ್ಯಗಳನ್ನು ನೀಡುತ್ತಿದ್ದೇವೆ. ಸ್ತ್ರೀ ಶಕ್ತಿಗಳಿಗೆ ಹೆಚ್ಚಿನ ಸವಲತ್ತುಗಳನ್ನು ನೀಡುತ್ತಿದ್ದೇವೆ. ಆದರೆ ಕಾಮಾಲೆ ಕಣ್ಣಿಗೆ ಕಾಣುವುದು ಹಳದಿ ಎಂದು ಕಾಂಗ್ರೆಸ್ ನಾಯಕರ ವಿರುದ್ಧ ಹರಿಹಾಯ್ದರು.
ಸಿದ್ದರಾಮೋತ್ಸವ ಕಾರ್ಯಕ್ರಮ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, ರಾಜ್ಯದಲ್ಲಿ ಹೆಚ್ಚಿನ ಮಳೆಯಿಂದಾಗಿ ಜನರು ಒದ್ದಾಡುತ್ತಿದ್ದಾರೆ. ಹೀಗಾಗಿ ನಮ್ಮ ಸರ್ಕಾರದ ಮಂತ್ರಿಗಳು ಹೋಗಿ ಅವರಿಗೆ ನೆರವಾಗುತ್ತಿದ್ದಾರೆ. ಆದರೆ ನೀವು ಏನು ಮಾಡುತ್ತಿದ್ದೀರಾ?, ಯಾರ ಹುಟ್ಟುಹಬ್ಬವನ್ನು ಯಾವ ರೀತಿ ಬೇಕಾದರೂ ಮಾಡಿಕೊಳ್ಳಲಿ. ನಮ್ಮದೇನು ಅಭ್ಯಂತರ ಇಲ್ಲ ಎಂದರು.
ಇದನ್ನೂ ಓದಿ: ಖಾಸಗಿ ಹೋಟೆಲ್ನಲ್ಲಿ ಬಿಜೆಪಿ ಶಾಸಕರ ಮೊಕ್ಕಾಂ, ರಾಷ್ಟ್ರಪತಿ ಚುನಾವಣೆಗೆ ಮಾದರಿ ಮತದಾನ ಪ್ರಕ್ರಿಯೆ