ಬಾಗೇಪಲ್ಲಿ(ಚಿಕ್ಕಬಳ್ಳಾಪುರ): ಮಳೆಗಾಲ ಶುರುವಾಗಿದ್ದರೂ ತಾಲೂಕಿನ ಬಹಳಷ್ಟು ಗ್ರಾಮಗಳಲ್ಲಿ ನೀರಿನ ಸಮಸ್ಯೆ ಎದುರಾಗುತ್ತಲೇ ಇದೆ. ಹೀಗಿರುವಾಗ ಹಲವೆಡೆ ರಾಜಕಾರಣಿಗಳು, ಅಧಿಕಾರಿಗಳು ಜಲ ಸಂರಕ್ಷಣೆಯ ಯೋಜನೆಗಳನ್ನು ಪರಿಣಾಮಕಾರಿಯಾಗಿ, ಪ್ರಾಮಾಣಿಕವಾಗಿ ಜಾರಿ ಮಾಡುವಲ್ಲಿ ವಿಫಲವಾಗುತ್ತಿದ್ದಾರೆ ಎಂಬ ಆರೋಪಗಳು ಕೇಳಿ ಬರುತ್ತಿವೆ.
ಊರಿಗೆ ನೀರನ್ನು ಸರಬರಾಜು ಮಾಡುತ್ತಿದ್ದ ಕೊಳವೆ ಬಾವಿಗಳು ಬತ್ತಿ ಹೋಗುತ್ತಿವೆ. ನೀರಿಗಾಗಿ ಪ್ರತಿ ಮನೆಗೊಬ್ಬರು ಕಾದು ಕುಳಿತುಕೊಳ್ಳುವ ಪರಿಸ್ಥಿತಿ ಎದುರಿಸಬೇಕಿದೆ. ಸರ್ಕಾರದಿಂದ ಕೆಲ ಗ್ರಾಮಗಳಲ್ಲಿ ಕೊಳವೆ ಬಾವಿಗಳನ್ನು ಕೊರೆಸಲಾಗುತ್ತಿದೆ. ಸಾವಿರ ಅಡಿಗಳವರೆಗೂ ಕೊರೆಸಿದರು ನೀರು ಸಿಗುತ್ತಿಲ್ಲ.
ಬಹಳಷ್ಟು ಭಾಗಗಳಲ್ಲಿ ಸ್ಥಳೀಯ ಮುಖಂಡರೊಂದಿಗೆ ಗುತ್ತಿಗೆದಾರರು ಸೇರಿಕೊಂಡು ಅಂತರ್ಜಲ ವೃದ್ಧಿಸುವ ಬದು ನಿರ್ಮಾಣ, ಚೆಕ್ ಡ್ಯಾಂ ನಿರ್ಮಾಣ, ಗಿಡ ಬೆಳೆಸುವುದು ಸೇರಿದಂತೆ ಹಲವಾರು ಕಾಮಗಾರಿಗಳು ಅವೈಜ್ಞಾನಿಕವಾಗಿ ಕೈಗೊಳ್ಳುತ್ತಿರುವ ನಿದರ್ಶನಗಳಿವೆ.
ತಾಲೂಕಿನ ಮಾರಗಾನಕುಂಟೆ ಗ್ರಾಮ ಪಂಚಾಯತಿ ವ್ಯಾಪ್ತಿಯ ದೇವಿಕುಂಟೆ ಗ್ರಾಮದಲ್ಲಿ ಕಳೆದ ವಾರದಿಂದ ನೀರಿಗಾಗಿ ಹೊಲ, ಗದ್ದೆ, ಕೆರೆ ಕುಂಟೆಗಳಿಗೆ ಅಲೆದಾಡುವಂತಹ ಪರಿಸ್ಥಿತಿ ಎದುರಾಗಿದೆ. ಯುವಕರು, ಮಹಿಳೆಯರು ದಿನ ನಿತ್ಯ ಬಳಕೆಗೆ ನೀರನ್ನು ಹುಡುಕಿಕೊಂಡು ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಊರಿನ ಕೊಳವೆ ಬಾವಿಯ ಮೋಟಾರ್ ದುರಸ್ತಿಗೊಂಡಿದೆ. ಅದನ್ನು ತುರ್ತಾಗಿ ಸರಿಪಡಿಸುವ ಗೋಜಿಗೆ ಅಧಿಕಾರಿಗಳು ಮುಂದಾಗುತ್ತಿಲ್ಲ ಎಂದು ಗ್ರಾಮಸ್ಥರು ನೋವನ್ನು ತೋಡಿಕೊಂಡರು.
ದೂರದ ಕೆರೆ, ಕುಂಟೆಗಳಿಂದ ನೀರು ತರಲು ಪ್ರಯಾಸ ಪಡಬೇಕು. ಹಾಗಾಗಿ ಭಾರ ಕಡಿಮೆಯಾಗಲಿ ಎಂಬ ಉದ್ದೇಶದಿಂದ ಉದ್ದನೆಯ ಕೋಲಿಗೆ ನಾಲ್ಕೈದು ಬಿಂದಿಗೆಗಳನ್ನು ಕಟ್ಟಿಕೊಂಡು ನೀರು ಹೊತ್ತು ತರುವಂತಹ ಪರಿಸ್ಥಿತಿಯಲ್ಲಿ ನಾವಿದ್ದೇವೆ ಎಂದು ಗ್ರಾಮದ ಯುವಕರು ತಿಳಿಸಿದ್ದಾರೆ.
ಇನ್ನಾದರೂ ಸಂಬಂಧಪಟ್ಟ ಗ್ರಾಮ ಪಂಚಾಯತಿ ಅಧಿಕಾರಿಗಳು ದೇವಿಕುಂಟೆ ಗ್ರಾಮದ ನೀರಿನ ಸಮಸ್ಯೆ ಬೇಗ ಬಗೆಹರಿಸಲಿ ಎಂದು ಗ್ರಾಮಸ್ಥರು ಮನವಿ ಮಾಡಿದ್ದಾರೆ.