ಚಿಕ್ಕಬಳ್ಳಾಪುರ : ಈ ಬಾರಿ ರಾಜ್ಯದ ಮತದಾರರು ಲೋಕಸಭಾ ಚುನಾವಣೆಯಲ್ಲಿ ಉತ್ಸಾಹದಿಂದ ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸಬಹುದು ಎಂಬ ನಿರೀಕ್ಷೆ ಹುಸಿಯಾಗಲಿಲ್ಲ. ಮತದಾರರಲ್ಲಿ ಪಟ್ಟಿಯಲ್ಲಿ ಹೆಸರು ಇರುವವರು ಹೆಚ್ಚು ಜನ ಮತಗಟ್ಟೆಯತ್ತ ಹೆಜ್ಜೆ ಹಾಕಿದ್ದಾರೆ. ಅಲ್ಲದೇ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ ಈ ಸಲಹೆಚ್ಚು ಮತದಾನವಾಗಿದೆ.
76.76% ರಷ್ಟು ಮತದಾನ:
ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ 76.76% ರಷ್ಟು ಮತದಾನವಾಗಿದೆ. ಪ್ರತಿ ಲೋಕಸಭಾ ಚುನಾವಣೆಯಲ್ಲೂ ಚಿಕ್ಕಬಳ್ಳಾಪುರ ಕ್ಷೇತ್ರದ ಮತದಾನದ ಪ್ರಮಾಣ ರಾಜ್ಯದ ಬೇರೆ ಕ್ಷೇತ್ರದ ಮತದಾನದ ಸರಾಸರಿಗಿಂತ ಹೆಚ್ಚಿಗೆ ಇರುತ್ತಿತ್ತು. ಈ ಬಾರಿಯೂ ಅದು ಪುನರಾವರ್ತನೆಯಾಗಿದೆ. ಕಳೆದ ಚುನಾವಣೆಯ ಮತದಾನಕ್ಕೆ ಹೋಲಿಸಿದರೆ ಈ ಸಲ ಸ್ವಲ್ಪ ಮಟ್ಟಿಗೆ ಹೆಚ್ಚಿನ ಮತದಾನವಾಗಿದೆ. ಮತದಾನದ ಪ್ರಮಾಣ ಹೆಚ್ಚಿಸಲು ಚುನಾವಣಾ ಆಯೋಗವು ನಡೆಸಿದ್ದ ಕಸರತ್ತುಗಳು ಫಲ ನೀಡಿವೆ.
ಕಳೆದ ಚುನಾವಣೆಗಿಂತ ಮತದಾನದ ಪ್ರಮಾಣ ಹೆಚ್ಚಳ:
ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ವ್ಯಾಪ್ತಿಯ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ, ಹೊಸಕೋಟೆಯಲ್ಲಿ ಎಂದಿನಂತೆ ಹೆಚ್ಚು ಮತದಾನ ನಡೆದಿದೆ. ನೆಲಮಂಗಲ, ದೊಡ್ಡಬಳ್ಳಾಪುರ, ಚಿಕ್ಕಬಳ್ಳಾಪುರ, ಯಲಹಂಕ ಕ್ಷೇತ್ರಗಳಲ್ಲಿ ಕಳೆದ ಚುನಾವಣೆಯಷ್ಟೇ ಈ ಸಲವು ಮತದಾನವಾಗಿದೆ. ಗೌರಿಬಿದನೂರು, ಬಾಗೇಪಲ್ಲಿಯಲ್ಲಿ ಸ್ವಲ್ಪ ಕಡಿಮೆ ಮತದಾನವಾಗಿದೆ. ಈ ಎಲ್ಲಾ ವಿಧಾನಸಭಾ ಕ್ಷೇತ್ರಗಳನ್ನು ಹೊಂದಿರುವ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಮತದಾನದ ಪ್ರಮಾಣವು ಕಳೆದ ಚುನಾವಣೆಗಿಂತ ಹೆಚ್ಚಾಗಿದೆ.
ಸಫಲಗೊಂಡ ಮತದಾನ ಜಾಗೃತಿ ಕಾರ್ಯಕ್ರಮ:
ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ ಸಾಲು ಸಾಲು ರಜೆ ಯಾವುದೇ ಪರಿಣಾಮ ಬೀರಿಲ್ಲ. ಪ್ರತಿ ಬಾರಿಯಂತೆ ಈ ಸಲವೂ ಮತದಾರರು ಮತ ಚಲಾಯಿಸಿದ್ದಾರೆ. ಮತದಾನ ಜಾಗೃತಿಗೆ ಹಲವು ಕಾರ್ಯಕ್ರಮಗಳುನ್ನು ಚುನಾವಣಾ ಅಧಿಕಾರಿಗಳು ಹಮ್ಮಿಕೊಂಡಿದ್ದರು. ಚಿತ್ರ ಪ್ರದರ್ಶನ, ಸಹಿ ಸಂಗ್ರಹ ಕಾರ್ಯಕ್ರಮ, ರಂಗೋಲಿ ಸ್ಪರ್ಧೆ ಮೂಲಕ ಜಾಗೃತಿ, ಬೈಕ್ ಜಾಥಾ ಹೀಗೆ ಹಲವು ರೀತಿಯಲ್ಲಿ ಮತದಾನ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದರು. ಇದರ ಜೊತೆಯಲ್ಲಿ ಸ್ವಯಂ ಪ್ರೇರಿತರಾಗಿ ಸಾರ್ವಜನಿಕರು ಭಾಗವಹಿಸಿದ್ದರು. ಅವರ ಪ್ರಯತ್ನ ಸಫಲವಾಯ್ತು. ಕಳೆದ ಚುನಾವಣಾ ಮತದಾನಕ್ಕಿಂತ ಈ ಬಾರಿ ಹೆಚ್ಚಿನ ಮತದಾನವಾಗಿದ್ದು ಚುನಾವಣಾ ಅಧಿಕಾರಿಗಳ ಕಾರ್ಯ ಯಶಸ್ವಿಯಾಗಿದೆ.