ಚಿಕ್ಕಬಳ್ಳಾಪುರ: ರಾತ್ರೋರಾತ್ರಿ ಗ್ರಾಮಕ್ಕೆ ನುಗ್ಗಿ ಹಸುಗಳ್ಳತನ ಮಾಡುತ್ತಿದ್ದ ಖದೀಮರಿಗೆ ಗ್ರಾಮಸ್ಥರು ಹಿಗ್ಗಾಮುಗ್ಗಾ ಥಳಿಸಿ ನಂತರ ಪೊಲೀಸರಿಗೊಪ್ಪಿಸಿದ ಘಟನೆ ಜಿಲ್ಲೆಯ ಗುಡಿಬಂಡೆ ತಾಲೂಕಿನ ಸೋಮೇಶ್ವರ ಗ್ರಾಮದಲ್ಲಿ ನಡೆದಿದೆ.
ಸೋಮೇಶ್ವರ ಗ್ರಾಮದಲ್ಲಿ ಇತ್ತೀಚೆಗೆ ಹಸು ಕಳ್ಳರ ಕಾಟ ಹೆಚ್ಚಾಗಿತ್ತು. ಆದರೆ ಕಳ್ಳರು ಯಾರು ಅನ್ನೋದು ಗೊತ್ತಾಗಿರಲಿಲ್ಲ. ಪೊಲೀಸರಿಗೆ ದೂರು ನೀಡಿದ್ದರೂ ಯಾವುದೇ ಪ್ರಯೋಜನವಾಗಿರಲಿಲ್ಲ. ಇಂಥ ಸಂದರ್ಭದಲ್ಲಿ ಮೊನ್ನೆ ಗ್ರಾಮದಲ್ಲಿ ಅಕ್ರಮವಾಗಿ ಹಸು ಸಾಗಿಸುತ್ತಿದ್ದ ಮೂವರು ಖದೀಮರು ಗ್ರಾಮಸ್ಥರ ಕೈಗೆ ಸಿಕ್ಕಿ ಬಿದ್ದಿದ್ದರು. ಇದರಿಂದ ಕೆರಳಿದ ಗ್ರಾಮಸ್ಥರು, ಕಳ್ಳರನ್ನು ಹಿಗ್ಗಾಮುಗ್ಗಾ ಥಳಿಸಿದ್ದಾರೆ.
ಮಹ್ಮದ್ ಇರ್ಶಾದ್, ನರಸಿಂಹಮೂರ್ತಿ, ನಾರಾಯಣಸ್ವಾಮಿ ಎನ್ನುವವರು ಗುಡಿಬಂಡೆ ಕಡೆಯಿಂದ ಶಿಡ್ಲಘಟ್ಟ ಕಡೆಗೆ ಎರಡು ಟಾಟಾ ಏಸ್ ವಾಹನಗಳಲ್ಲಿ ಆರು ಹಸುಗಳನ್ನು ಅಕ್ರಮವಾಗಿ ಸಾಗಿಸುತ್ತಿದ್ದರು. ಆದರೆ ಸೋಮೇಶ್ವರ ಗ್ರಾಮದ ಬಳಿ ಒಂದು ವಾಹನ ಕೆಟ್ಟು ನಿಂತಿತ್ತು. ವಾಹನಗಳಲ್ಲಿದ್ದ ಹಸುಗಳಿಗೆ ಪ್ರಜ್ಞೆ ಇರಲಿಲ್ಲ. ಹಸುಗಳಿಗೆ ಓವರ್ ಡೋಸ್ ಅನಸ್ತೇಷಿಯಾ ನೀಡಿ ಪ್ರಜ್ಞೆ ತಪ್ಪಿಸಲಾಗಿತ್ತು. ಇದರಿಂದ ಕೆರಳಿದ ಗ್ರಾಮಸ್ಥರು ಆರೋಪಿಗಳನ್ನು ಅರೆಬೆತ್ತಲೆ ಮಾಡಿ ಥಳಿಸಿದ್ದಾರೆ.
ಇದನ್ನೂ ಓದಿ: 'ಮಹೀಂದ್ರಾ ಕುಟುಂಬಕ್ಕೆ ನಿಮಗೆ ಸ್ವಾಗತ'.. ತುಮಕೂರಿನ ಕೆಂಪೇಗೌಡರಿಗೆ ಧನ್ಯವಾದ ಅರ್ಪಿಸಿದ ಆನಂದ್ ಮಹೀಂದ್ರಾ!
ಸರ್ಕಾರ ಗೋಹತ್ಯೆ ನಿಷೇಧ ಕಾಯ್ದೆ ಅನುಷ್ಠಾನಗೊಳಿಸಿದರೂ ಹಸು ಕಳ್ಳರು ರಂಗೋಲಿ ಕೆಳಗೆ ತೂರಿ ಮನೆಯ ಮುಂದಿರುವ ಹಸುಗಳನ್ನು ಅಪಹರಣ ಮಾಡುತ್ತಿದ್ದರು. ಇದರಿಂದ ಆಕ್ರೋಶಗೊಂಡ ಜನ ಆರೋಪಿಗಳನ್ನು ಥಳಿಸಿ ಬುದ್ಧಿ ಕಲಿಸಿದ್ದಾರೆ.
ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ