ಚಿಕ್ಕಬಳ್ಳಾಪುರ: ಎತ್ತಿನಹೊಳೆ ಯೋಜನೆಗೆ 23 ಸಾವಿರ ಕೋಟಿ ರೂ ಮೀಸಲಿಟ್ಟಿದ್ದು ಮುಂದಿನ ವರ್ಷ ಎಲ್ಲಾ ಕೆರೆಗಳಿಗೂ ನೀರು ಹರಿಸಲಾಗುವುದೆಂದು ಚಿಕ್ಕಬಳ್ಳಾಪುರದಲ್ಲಿ ಆರೋಗ್ಯ ಸಚಿವ ಸುಧಾಕರ್ ಹೇಳಿದರು. ತಾಲೂಕಿನ ತಿಪ್ಪೇನಹಳ್ಳಿ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಲು ಉದ್ದೇಶಿಸಿರುವ ಮೀನುಗಾರಿಕೆ ಇಲಾಖೆಯ ಉಪನಿರ್ದೇಶಕರ ಹಾಗೂ ಸಹಾಯಕ ನಿರ್ದೇಶಕರ ಕಚೇರಿಯ ಕಟ್ಟಡ ಕಾಮಗಾರಿಯ ಭೂಮಿಪೂಜೆ ನೇರವೇರಿಸಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿನ ಕೆರೆಕಟ್ಟೆಗಳನ್ನು ಗುತ್ತಿಗೆ ಪಡೆದು ಮೀನು ಸಾಕಾಣಿಕೆ ಮಾಡುವುದು ಬಯಲುಸೀಮೆಯ ಮೀನುಗಾರರ ಪ್ರಮುಖ ಉದ್ಯೋಗ ಹಾಗೂ ಆರ್ಥಿಕ ಮೂಲವಾಗಿದೆ. ಈ ಮೀನುಗಾರರ ಹಿತಕ್ಕಾಗಿ ಸರ್ಕಾರ ಕಟ್ಟಿಬದ್ಧವಾಗಿದ್ದು ಅವರಿಗೆ ಹೆಚ್ಚು ಪ್ರೋತ್ಸಾಹ, ನೆರವು ನೀಡಲಾಗುವುದು ಎಂದರು.
ನಂತರ ಮಾತನಾಡಿ, ಪುರುಷರ ಸಮಾನವಾಗಿ ಮಹಿಳೆಯರನ್ನು ಸದೃಢಗೊಳಿಸುವ ಉದ್ದೇಶದಿಂದ ಇಂದು ಸ್ತ್ರೀ ಶಕ್ತಿ ಸಂಘಗಳ ಮೂಲಕ ಅವರನ್ನು ಆರ್ಥಿಕವಾಗಿ ಸದೃಢರನ್ನಾಗಿಸಲು ಶೂನ್ಯ ಬಡ್ಡಿ ರಹಿತ ಸಾಲ ಸೌಲಭ್ಯವನ್ನು ನೀಡಲಾಗುತ್ತಿದೆ. ಇದರಿಂದ ಅವರ ಕುಟುಂಬದ ಸ್ಥಿತಿಗತಿ ಬದಲಾವಣೆಯಾಗಿ ಆರ್ಥಿಕವಾಗಿ ಕುಟುಂಬದ ಪೋಷಣೆ ಸುಲಭಗೊಳುತ್ತದೆ. ಇದರಿಂದ ಮಹಿಳೆಯರು ಸ್ತ್ರೀಶಕ್ತಿ ಸಂಘಗಳಲ್ಲಿ ಸದಸ್ಯತ್ವನ್ನು ಪಡೆದುಕೊಳ್ಳಬೇಕು ಎಂದು ಹೇಳಿದರು.
ಸಾರ್ವಜನಿಕರ ಶ್ರೇಯೋಭಿವೃದ್ಧಿಗೆ ಸರ್ಕಾರ ವಿವಿಧ ಯೋಜನೆಗಳನ್ನು ರೂಪಿಸಿದೆ. ಈ ಸೌಲಭ್ಯಗಳನ್ನು ಪಡೆದುಕೊಳ್ಳಲು ಪ್ರತಿಯೊಬ್ಬರೂ ಬ್ಯಾಂಕ್ ಖಾತೆಗಳನ್ನು ತೆರೆಯಬೇಕು. ಬ್ಯಾಂಕ್ ಖಾತೆ ಇದ್ದಲ್ಲಿ ಸರ್ಕಾರಿ ಸೌಲಭ್ಯಗಳ ಹಣವನ್ನು ನೇರವಾಗಿ ಡಿಬಿಡಿ ಮೂಲಕ ತಮ್ಮ ಖಾತೆಗಳಿಗೆ ನೇರವಾಗಿ ಜಮೆ ಮಾಡಲಾಗುತ್ತಿದೆ. ಸರ್ಕಾರಿ ಸೌಲಭ್ಯಗಳನ್ನು ಪ್ರತಿಯೊಬ್ಬರೂ ಸದುಪಯೋಗಪಡಿಸಿಕೊಳ್ಳಬೇಕು ಎಂದು ಸಾರ್ವಜನಿಕರಲ್ಲಿ ಕೋರಿದರು.
ಮುಂದಿನ ವರ್ಷ ಕೆರೆಗಳಿಗೆ ಎತ್ತಿನಹೊಳೆ ನೀರು: ಎತ್ತಿನಹೊಳೆ ಯೋಜನೆಯ 13 ಸಾವಿರ ಕೋಟಿ ರೂ ಅನುದಾನವನ್ನು ಪರಿಷ್ಕರಣೆ ಮಾಡಿ 10 ಸಾವಿರ ಕೋಟಿ ರೂಗಳನ್ನು ಏರಿಕೆ ಮಾಡಿದ್ದು ಒಟ್ಟಾರೆ 23 ಸಾವಿರ ಕೋಟಿ ರೂಗಳು ಮೀಸಲಿಡಲಾಗಿದೆ. ಈ ಯೋಜನೆಯಿಂದ ಪ್ರತಿ ಕೆರೆಗೆ ಕುಡಿಯುವ ನೀರು ಬಿಡಲಾಗುವುದು. ಈಗಾಗಲೇ ಜಿಲ್ಲೆಯಲ್ಲಿ ಎಲ್ಲ ಕೆರೆಗಳನ್ನು ತುಂಬಿಸಲಾಗಿದ್ದು ಈ ಭಾಗದ ರೈತರಿಗೆ ಅನುಕೂಲವಾಗಲಿದೆ. ಜೊತೆಗೆ ಜಿಲ್ಲೆಯಲ್ಲಿ ನಿವೇಶನ ರಹಿತ ಕುಟುಂಬಗಳನ್ನು ಗುರುತಿಸಿ ಒಟ್ಟು 22 ಸಾವಿರ ನಿವೇಶನಗಳನ್ನು ಹಂಚಲಾಗುವುದು. ಮಂಚೇನಹಳ್ಳಿ ತಾಲ್ಲೂಕಿನಲ್ಲಿ ಒಟ್ಟು 7 ಸಾವಿರ ನಿವೇಶನಗಳನ್ನು ಹಂಚಲಾಗುವುದು ಎಂದು ತಿಳಿಸಿದರು.
ಇದನ್ನೂ ಓದಿ:ಯಡಿಯೂರಪ್ಪ- ಬೊಮ್ಮಾಯಿ ಸಂಬಂಧ ತಂದೆ - ಮಗನಂತಿದೆ: ಕಾಂಗ್ರೆಸ್ಗೆ ಟಾಂಗ್ ಕೊಟ್ಟ ಸಚಿವ ಸುಧಾಕರ್