ಚಿಕ್ಕಬಳ್ಳಾಪುರ: ಜಿಲ್ಲೆಯ ಗೌರಿಬಿದನೂರು ತಾಲೂಕಿನ ತೊಂಡೆಭಾವಿ ರೈಲ್ವೆ ನಿಲ್ದಾಣದ ಸಮೀಪ ಹಳಿ ಮೇಲೆ ಛಿದ್ರಗೊಂಡ ರೀತಿಯಲ್ಲಿ ಮೂವರ ಮೃತದೇಹಗಳು ಪತ್ತೆಯಾಗಿವೆ. ಅಂದಾಜು 45 ವರ್ಷದ ಪುರುಷ ವ್ಯಕ್ತಿ ಮತ್ತು ಅಂದಾಜು 35-25 ವರ್ಷದ ಇಬ್ಬರು ಮಹಿಳೆಯರ ಮೃತದೇಹಗಳೆಂದು ಪೊಲೀಸ್ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ. ಮೃತದೇಹಗಳ ಬಗ್ಗೆ ಹೆಚ್ಚು ವಿವರ ದೊರೆತಿಲ್ಲ. ಮೃತ ವ್ಯಕ್ತಿಯ ಶರ್ಟ್ ಮೇಲೆ ವಿನಾಯಕ ಟೈಲರ್ ಗೌರಿಬಿದನೂರು ಎಂಬ ಗುರುತಿದೆ. ಒಂದೇ ಕುಟುಂಬದ ಸದಸ್ಯರಾಗಿರುವ ಅನುಮಾನವನ್ನು ಸ್ಥಳೀಯರು ವ್ಯಕ್ತಪಡಿಸಿದ್ದಾರೆ.
ಸುದ್ದಿ ತಿಳಿದು ಘಟನಾ ಸ್ಥಳಕ್ಕೆ ಮಂಚೇನಹಳ್ಳಿ ಠಾಣೆಯ ಪೊಲೀಸರು ಹಾಗೂ ರೈಲ್ವೆ ಇಲಾಖೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹಗಳನ್ನು ಶವಾಗಾರಕ್ಕೆ ರವಾನಿಸಿರುವ ಮಂಚೇನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಈ ಮೂವರು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಸ್ಥಳೀಯರು ಶಂಕೆ ವ್ಯಕ್ತಪಡಿಸಿದ್ದಾರೆ. ಘಟನೆಯ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದು, ಇನ್ನಷ್ಟು ಮಾಹಿತಿ ತಿಳಿದು ಬರಬೇಕಿದೆ.
ಮೃತರ ಬಗ್ಗೆ ಸದ್ಯಕ್ಕೆ ಸ್ಪಷ್ಟ ಮಾಹಿತಿ ತಿಳಿದು ಬಂದಿಲ್ಲ. ಹಾಗಾಗಿ ಜಿಲ್ಲೆ ಸೇರಿದಂತೆ ಸುತ್ತಮುತ್ತಲಿನ ಪೊಲೀಸ್ ಠಾಣೆಯಲ್ಲಿ ಕಾಣೆಯಾದವರ ಬಗ್ಗೆ ಪರಿಶೀಲನೆ ನಡೆಸಿದ್ದೇವೆ. ಮೃತ ವ್ಯಕ್ತಿಯ ಕೊರಳಲ್ಲಿ ಲಿಂಗಧಾರಣೆ ಪತ್ತೆಯಾಗಿದೆ. ಸದ್ಯ ಈ ಬಗ್ಗೆ ಮಂಚೇನಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು ತನಿಖೆ ಪ್ರಗತಿಯಲ್ಲಿದೆ. ಡಿಎಸ್ ನಾಗೇಶ್, ಚಿಕ್ಕಬಳ್ಳಾಪುರ ಎಸ್ಪಿ
ಇದನ್ನೂ ಓದಿ: ಬೆಳ್ಳಂಬೆಳಗ್ಗೆ ಜವರಾಯನ ಅಟ್ಟಹಾಸ: ಪ್ರತ್ಯೇಕ ಅಪಘಾತದಲ್ಲಿ 7 ಸಾವು, 30 ಮಂದಿಗೆ ಗಾಯ