ಚಿಕ್ಕಬಳ್ಳಾಪುರ: ಜಿಲ್ಲೆಯ ಚಿಂತಾಮಣಿ ತಾಲೂಕಿನ ಚಿಲಕಲನೇರ್ಪು ಹೋಬಳಿಯ ಗಡಿಗವಾರಹಳ್ಳಿ ಗ್ರಾಮದಲ್ಲಿರುವ ಸುಮಾರು 150 ವರ್ಷಗಳ ಹಿಂದಿನ ಹಜರತ್ ಸಯ್ಯದ್ ಇಮಾಮ್ ಶಾ ವಲಿ ಬಾಬಾ ಮತ್ತು ಹಜರತ್ ಮುಷ್ಕಿಲ್ ಶಾ ವಲಿ ಬಾಬಾ ದರ್ಗಾಗಳಿಗೆ ಮೂಲಭೂತ ಸೌಕರ್ಯ ಒದಗಿಸುವಂತೆ ದರ್ಗಾ ಮುಖಂಡ ದಸ್ತಗಿರ್ ಮನವಿ ಮಾಡಿಕೊಂಡಿದ್ದಾರೆ.
ಹಜರತ್ ಸಯ್ಯದ್ ಇಮಾಮ್ ಶಾ ವಲಿ ಬಾಬಾ ಮತ್ತು ಹಜರತ್ ಮುಷ್ಕಿಲ್ ಶಾ ವಲಿ ಬಾಬಾ ದರ್ಗಾಗಳು ಭಕ್ತರ ಕೋರಿಕೆಗಳನ್ನು ಈಡೇರಿಸುವಲ್ಲಿ ಹೆಸರುವಾಸಿಯಾಗಿದೆ. ಹೀಗಾಗಿ ಪ್ರತಿ ಶುಕ್ರವಾರ ಮತ್ತು ಅಮಾವಾಸ್ಯೆ ದಿನಗಳಂದು ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾಧಿಗಳು ಹಾಜರಾಗಿ ತಮ್ಮ ಕೋರಿಕೆಗಳನ್ನು ಈಡೇರಿಸುವಂತೆ ಪ್ರಾರ್ಥಿಸುತ್ತಾರೆ. ಅಷ್ಟೇ ಅಲ್ಲಾ ಇಲ್ಲಿಗೆ ಬರುವ ಬಹುತೇಕ ಭಕ್ತರು ನಮ್ಮ ಕೋರಿಕೆಗಳು ಈಡೇರಿವೆ ಎಂದು ತಿಳಿಸುತ್ತಾರೆ.
ಇತ್ತೀಚಿನ ದಿನಗಳಲ್ಲಿ ಇಲ್ಲಿಗೆ ಬರುವ ಭಕ್ತರ ಸಂಖ್ಯೆಯೂ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇಷ್ಟೊಂದು ಹೆಸರುವಾಸಿಯಾಗಿರುವ ದರ್ಗಾದಲ್ಲಿ ಮೂಲಭೂತ ಸೌಕರ್ಯಗಳೇ ಇಲ್ಲ. ದರ್ಗಾ ಬಳಿ ಕುಡಿಯುವ ನೀರು ಸೇರಿದಂತೆ ,ಶೌಚ ವ್ಯವಸ್ಥೆ, ಸೂಕ್ತವಾದ ರಸ್ತೆ ವ್ಯವಸ್ಥೆಯೂ ಇಲ್ಲ. ಗಡಿಗವಾರಹಳ್ಳಿ ಗ್ರಾಮದಿಂದ ದರ್ಗಾ ಒಂದು ಕಿಲೋಮೀಟರ್ ದೂರದಲ್ಲಿದ್ದು ಭಕ್ತಾದಿಗಳಿಗೆ ಓಡಾಡಲು ಸೂಕ್ತ ರಸ್ತೆ ವ್ಯವಸ್ಥೆ ಹಾಗೂ ದರ್ಗಾ ಬಳಿ ನೀರು ಮತ್ತು ಶೌಚಾಲಯದ ವ್ಯವಸ್ಥೆ ಮಾಡಿಕೊಡಬೇಕೆಂದು ದರ್ಗಾ ಮುಖಂಡ ದಸ್ತಗಿರ್ ತಿಳಿಸಿದ್ದಾರೆ.