ಚಿಕ್ಕಬಳ್ಳಾಪುರ: ಸಮ್ಮಿಶ್ರ ಸರ್ಕಾರ ಪತನದ ನಂತರ ಬಿಜೆಪಿ ಸರ್ಕಾರ ಪ್ರಾಥಮಿಕ ಶಾಲೆಯ 7ನೇ ತರಗತಿ ಮಕ್ಕಳಿಗೆ ಪಬ್ಲಿಕ್ ಪರೀಕ್ಷೆ ಕುರಿತು ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದೆ. ಆದರೆ, ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ನಗರದ ಸರ್ಕಾರಿ ಶಾಲೆಯ ಮಕ್ಕಳಿಗೆ ಪಬ್ಲಿಕ್ ಪರೀಕ್ಷೆ ಇಲ್ಲದೇ ಮಕ್ಕಳು ಪರದಾಡುವಂತಾಗಿದೆ.
ಶಿಕ್ಷಣ ಇಲಾಖೆ ಸರ್ಕಾರಿ ಊರ್ದು ಕಿರಿಯ ಪ್ರಾಥಮಿಕ ಪಾಠ ಶಾಲೆಗೆ ಅನುಮತಿ ನೀಡಿದೆ. ಅಂದರೆ ಇಲ್ಲಿ 1ನೇ ತರಗತಿಯಿಂದ 5ನೇ ತರಗತಿಯವರೆಗೂ ಶಿಕ್ಷಣ ನೀಡುವಂತೆ ಅನುಮತಿ ನೀಡಲಾಗಿದೆ. ಆದರೆ, ಇಲ್ಲಿ ಮಾತ್ರ 7ನೇ ತರಗತಿವರೆಗೂ ಪಾಠಗಳನ್ನ ಮಾಡಲಾಗುತ್ತಿದೆ. ಸದ್ಯ 7ನೇ ತರಗತಿಗೆ ಪಬ್ಲಿಕ್ ಪರೀಕ್ಷೆ ಇರುವುದರಿಂದ ಇಲ್ಲಿನ ಮಕ್ಕಳಿಗೆ ವರ್ಗಾವಣೆಯನ್ನು ನೀಡಿ ಬೇರೊಂದು ಶಾಲೆಗೆ ಸೇರಿಕೊಳ್ಳುವಂತೆ ಸಲಹೆ ನೀಡಲಾಗುತ್ತಿದೆ. ಇದು ವಿದ್ಯಾರ್ಥಿಗಳಿಗೆ ದೊಡ್ಡ ತಲೆನೋವಾಗಿದೆ.
5ನೇ ತರಗತಿರವೆಗೂ ಕೊಠಡಿಗಳಿದ್ರೂ 7ನೇ ತರಗತಿವರೆಗೂ ಪಾಠಗಳನ್ನು ಮಾಡಲಾಗುತ್ತಿದ್ದ ಶಾಲೆಯಲ್ಲಿ ಈಗ ಮಕ್ಕಳಿಗೆ ಟಿಸಿ ಕೊಟ್ಟು ಬೇರೊಂದು ಶಾಲೆಗಳಿಗೆ ಸೇರಲು ತಿಳಿಸುತ್ತಿದ್ದಾರೆ. ಈಗಾಗಲೇ ಸುಮಾರು 20 ಮಕ್ಕಳಿಗೆ ಟಿಸಿ ಕೊಟ್ಟು ಬೇರೊಂದು ಶಾಲೆಗಳಿಗೆ ಸೇರಿಸಲಾಗಿದೆ.
ಇದೇ ವಿಚಾರವನ್ನು ನಗರದ 15ನೇ ವಾರ್ಡ್ ನಗರಸಭಾ ಸದಸ್ಯ ಬಶೀರ್ ಅಲ್ಲಾಬಕ್ಷ್ ಕಳೆದ ಮೂರು ವರ್ಷಗಳಿಂದ ಶಾಲೆಯ ಸಿಬ್ಬಂದಿಗೆ ಮಾಹಿತಿ ಮುಟ್ಟಿಸಿದ್ದರು. ಆದರೆ, ಯಾವುದೇ ಪ್ರಯೋಜನವಾಗಲಿಲ್ಲ. ಈಗ ಮಕ್ಕಳು ಇದರಿಂದಾಗಿ ತೊಂದರೆಗೀಡಾಗಿವೆ ಅಂತಾ ತಮ್ಮ ಅಸಹಾಯಕತೆ ತೋರಿಸುತ್ತಿದ್ದಾರೆ ಅಲ್ಲಾಬಕ್ಷ್.