ಬಾಗೇಪಲ್ಲಿ (ಚಿಕ್ಕಬಳ್ಳಾಪುರ): ಬಯಲು ಸೀಮೆಯ ಜಿಲ್ಲೆಗಳ ಪ್ರಮುಖ ಸಮಸ್ಯೆಯೇ ನೀರು. ಒಂದು ಕಾಲದಲ್ಲಿ ಏಷ್ಯಾ ಖಂಡದಲ್ಲೇ ಅತಿ ಹೆಚ್ಚು ಕೆರೆಗಳಿರುವ ಅವಿಭಜಿತ ಕೋಲಾರ ಜಿಲ್ಲೆಯಲ್ಲಿ ಈಗ ನೀರಿನ ಸಮಸ್ಯೆ ವ್ಯಾಪಕವಾಗಿ ಕಾಡುತ್ತಿದೆ. ಹಾಗಾಗಿಯೇ ಇತ್ತೀಚೆಗೆ ಜಲಸಂರಕ್ಷಾಣ ವಿಧಾನಗಳಿಗೆ ಒತ್ತು ಕೊಡಲಾಗುತ್ತಿದೆ. ಬಹಳಷ್ಟು ಗ್ರಾಮಗಳಲ್ಲಿನ ಕೃಷಿ ಜಮೀನುಗಳಲ್ಲಿ ನರೇಗಾ ಯೋಜನೆ ಅಡಿ ಮಳೆ ನೀರು ಇಂಗಿಸುವ ಹಾಗೂ ಬದುಗಳ ನಿರ್ಮಾಣ ಕೆಲಸಗಳು ಮಾಡುತ್ತಿರುವುದನ್ನು ನೋಡಬಹುದು.
ಆದರೆ, ಜಿಲ್ಲೆಯ ಬಾಗೇಪಲ್ಲಿ ತಾಲೂಕಿನ ಮಾರಗಾನಕುಂಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ದೇವಿಕುಂಟೆ ಬೆಟ್ಟದ ಮೇಲೆ ಶತಮಾನಗಳ ಹಿಂದೆಯೇ ವೈಜ್ಞಾನಿಕ ವಿಧಾನ ಅಳವಡಿಸಿಕೊಳ್ಳುವ ಮೂಲಕ ನೀರಿನ ಸಂರಕ್ಷಣೆ, ನೀರಿಂಗಿಸುವ ಕೆಲಸವನ್ನ ಇಟ್ಟಿಗೆ ದುರ್ಗವನ್ನಾಳಿದವರು ಮಾಡಿದ್ದಾರೆ. ಅದರ ಕುರುಹುಗಳನ್ನು ನಾವೀಗ ಇಲ್ಲಿ ಕಾಣಬಹುದಾಗಿದೆ.

ನೂರಾರು ಅಡಿಗಳಷ್ಟು ಎತ್ತರದ ಬೆಟ್ಟವನ್ನು ಹತ್ತಿದಾಗ ಮೇಲ್ಭಾಗವನ್ನು ಸುತ್ತಿದರೆ ಇಟ್ಟಿಗೆ ದುರ್ಗದ ಮೇಲೆ ವಿಶಾಲವಾದ ಜಾಗ ಇದೆ. ಅಲ್ಲಿ ನೀರಾವರಿಗೆ ಹೆಚ್ಚು ಒತ್ತು ಕೊಡಲಾಗಿದೆ. ಅದಕ್ಕೆ ಸಂಬಂಧಿಸಿದ ದೊಣೆ, ಹೊಂಡ , ಬಾವಿ , ಕಲ್ಯಾಣಿಗಳನ್ನು ಈಗಲೂ ಕಾಣಬಹುದಾಗಿದೆ. ಕೋಟೆ ಮತ್ತು ಬುರೂಜುಗಳು ಕಟ್ಟಡಗಳಷ್ಟೇ ಆಗದೆ ಬೆಟ್ಟದ ಮೇಲೆ ವಿಶೇಷವಾಗಿ ನೀರು ಇಂಗಿಸುವ ಕೆಲಸ ಮಾಡಲಾಗಿದೆ.
ಬೆಟ್ಟದ ತಪ್ಪಲಿನಲ್ಲಿ ತಗ್ಗಿರುವ ಭೂ ಪ್ರದೇಶ ಇದೆ. ಈ ಭಾಗದಲ್ಲಿ ಅಂದಿನ ಕಾಲಕ್ಕೆ ಸಾಕು ಕುದುರೆ, ಆನೆ, ಎಮ್ಮೆ , ಹಸು, ಕುರಿ, ಆಡು ಪ್ರಾಣಿಗಳಿಗೆ ಹುಲ್ಲು ಬೆಳೆಯಲು ಹಾಗೂ ಪ್ರಾಣಿಗಳಿಗೆ ಕುಡಿಯುವ ನೀರಿನ ಸೌಲಭ್ಯಕ್ಕಾಗಿ ಸ್ಥಳೀಯವಾಗಿಯೇ ದೊರೆಯುತ್ತಿದ್ದ ಕಲ್ಲುಗಳಿಂದಲೇ ಗೋಡೆಗಳನ್ನು ನಿರ್ಮಿಸಲಾಗಿದೆ. ಕಲ್ಯಾಣಿ ದೊಣೆ, ಬಾವಿ, ಹೊಂಡಗಳಿಗೆ ಮಳೆ ನೀರು ಸಂಗ್ರಹ ಮಾಡಿರುವುದನ್ನು ಇಂದಿಗೂ ಕಾಣಬಹುದು ಎನ್ನುತ್ತಾರೆ ಗ್ರಾಮದ ನಿವಾಸಿಗಳು.

ಇಟ್ಟಿಗೆ ದುರ್ಗದ ಬೆಟ್ಟದ ಮೇಲೆ ಬೀಳುವ ಮಳೆ ನೀರು ಉತ್ತರ ಮುಖವಾಗಿ ಅಕ್ಕಮ್ಮ ದೊಣೆಗೆ ಹಾಗೂ ದಕ್ಷಿಣ ಮುಖವಾಗಿ ಬೆಟ್ಟದಿಂದ ಸಂಜೀವಮ್ಮ ಕೆರೆ ಸೇರುತ್ತದೆ. ಇಲ್ಲಿ ಕೆರೆಯ ನೀರಿನ ಸಹಾಯದಿಂದ ಇಟ್ಟಿಗೆ ತಯಾರಿಸಿ ಆನೆ ಮತ್ತು ಕುದರೆ ಮೂಲಕ ಇಟ್ಟಿಗೆ ದುರ್ಗ ಕೋಟೆ ನಿರ್ಮಾಣಕ್ಕೆ ಸಾಗಿಸಲಾಗಿತ್ತು ಎಂಬ ಮಾಹಿತಿಯನ್ನು ಶಾಸನಗಳಲ್ಲಿ ಉಲ್ಲೇಖಿಸಲಾಗಿದೆ. ನಿರಂತರವಾಗಿ ಮಳೆ ಬಂದಾಗ ಮಾತ್ರ ಬೆಟ್ಟದ ಮೇಲಿಂದ ನೀರು ಕೆಳಗಡೆಗೆ ಬರುತ್ತದೆ. ಉಳಿದಂತೆ ಸಣ್ಣ ಪುಟ್ಟ ಮಳೆ ಬಂದರೆ ಬೆಟ್ಟದಲ್ಲಿನ ಕಲ್ಯಾಣಿ ಮಾದರಿ ನಿರ್ಮಿಸ ಲಾಗಿರುವ ತಡೆಗೋಡೆಗಳಿಂದ ಇಲ್ಲಿ ನೀರು ಇಂಗುವಂತೆ ಮಾಡಲಾಗಿತ್ತು.

ಇದಲ್ಲದೇ ಇಟ್ಟಿಗೆ ದುರ್ಗ ಅಕ್ಕಮ್ಮ ದೊಣೆಯ ಇಂಗುವ ನೀರು ಸರ್ವ ಋತುವಿನಲ್ಲಿಯು ತುಂಬಿರುತ್ತದೆ . ಈ ನೀರು ದೇವಿಕುಂಟೆ ಗ್ರಾಮದ ಕುಡಿಯುವ ನೀರಿನ ಬಾವಿಗೆ ಸಂಪರ್ಕ ಹೊಂದಿದೆ. ಈ ನೀರಿನ್ನೇ ಆ ಗ್ರಾಮದ ಜನರು ಉಪಯೋಗಿಸುತ್ತಾರೆ.
ಬೆಟ್ಟದ ಮೇಲೆ ಅಂದಿನ ಕಾಲಕ್ಕೆ ಮಳೆ ನೀರು ತಡೆದು ನಿಲ್ಲಿಸಲು ಕಲ್ಲಿನಿಂದ ನಿರ್ಮಿಸಲಾಗಿರುವ ತಡೆ ಗೋಡೆ ಕಲ್ಲುಗಳು ಅಲ್ಲಲ್ಲಿ ಕಾಲಾನುಕ್ರಮದಲ್ಲಿ ಹಾಳಾಗಿವೆ. ಅರಣ್ಯ ಇಲಾಖೆ ಪ್ರವಾಸೋದ್ಯಮ ಇಲಾಖೆ ಪುರಾತತ್ವ ಇಲಾಖೆ ವತಿಯಿಂದ ಮತ್ತೆ ಕಟ್ಟಿಸುವ ಕೆಲಸ ಆಗಬೇಕಾಗಿದೆ. ಬೆಟ್ಟದ ಮೇಲೆ ನೀರು ಸಂಗ್ರಹವಾಗಿ ಇಂಗಿದರೆ ಮಾತ್ರ ಬೆಟ್ಟ ಹಸಿರು ಉಳಿಸಿಕೊಳ್ಳಲು ಸಾಧ್ಯವಾಗಲಿದೆ.