ಬಾಗೇಪಲ್ಲಿ/ಚಿಕ್ಕಬಳ್ಳಾಪುರ: ಪಟ್ಟಣದ 5ನೇ ವಾರ್ಡ್ನಲ್ಲಿ ಹದಗೆಟ್ಟ ಚರಂಡಿ ವ್ಯವಸ್ಥೆಯಿಂದ ಕಲುಷಿತ ವಾತಾವರಣ ಸೃಷ್ಟಿಯಾಗಿದೆ. ತ್ಯಾಜ್ಯ ನೀರು ಹರಿದು ಹೋಗದೆ ಮಡುಗಟ್ಟಿ ನಿಂತಿದ್ದು, ಸಾಂಕ್ರಾಮಿಕ ರೋಗದ ಭೀತಿ ತಲೆದೋರಿದೆ. ಆದರೆ ಸ್ಥಳೀಯ ಪುರಸಭೆ ಮಾತ್ರ ಸಂಪೂರ್ಣ ನಿರ್ಲಕ್ಷ್ಯ ವಹಿಸಿದೆ ಎಂಬ ಆರೋಪ ಕೇಳಿ ಬಂದಿದೆ.
ಬೆಳಕು ಹರಿದರೆ ದುರ್ವಾಸನೆಗೆ ಮೂಗು ಸಿಂಡರಿಸುವ ಈ ವಾರ್ಡ್ನ ಜನರಿಗೆ ಸಂಜೆಯಾದರೆ ಸೊಳ್ಳೆ ಕಾಟ. ಮೂಗು ಮುಚ್ಚಿಕೊಂಡು ವ್ಯವಹರಿಸಬೇಕಾದ ಪರಿಸ್ಥಿತಿ ಇಲ್ಲಿನ ಜನರದ್ದು. ಇಷ್ಟಾದರೂ ಯಾವೊಬ್ಬ ಪುರಸಭೆ ಅಧಿಕಾರಿಯಾಗಲಿ ಅಥವಾ ಸದಸ್ಯರಾಗಲಿ ಈ ಬಗ್ಗೆ ಗಮನ ಹರಿಸದೇ ಇರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ.
ಕೆಲವೆಡೆ ಚರಂಡಿಗಳೇ ಇಲ್ಲದೆ ತ್ಯಾಜ್ಯ ನೀರು ರಸ್ತೆಯಲ್ಲೇ ಹರಿದು ಪಾಚಿಗಟ್ಟಿದೆ. ಜನರು ಈ ಗಲೀಜು ನೀರಿನಲ್ಲಿಯೇ ನಡೆದಾಡಬೇಕಾಗಿದೆ. ರಾತ್ರಿ ವೇಳೆ ಕಾಲು ಜಾರಿ ಬಿದ್ದವರ ಸಂಖ್ಯೆಗೇನು ಕಡಿಮೆಯಿಲ್ಲ. 'ಕಲ್ಮಷ ನೀರು ತುಂಬಿದ ಕಸದ ಗುಂಡಿ ಇರುವುದರಿಂದ ಚಿಕ್ಕ ಮಕ್ಕಳನ್ನು ಮನೆ ಹೊರಗೆ ಬಿಡಲು ಭಯವಾಗುತ್ತದೆ. ಕಟ್ಟಿಕೊಂಡ ಕಸದ ಗುಂಡಿಯಿಂದಾಗಿ ಕ್ರಿಮಿ-ಕೀಟಗಳು ಹೆಚ್ಚುತ್ತಿವೆ. ಗಬ್ಬು ವಾಸನೆಗೆ ಹೊಟ್ಟೆ ತೊಳಸಿದಂತಾಗುತ್ತಿದೆ. ಜನರಿಗೆ ಆಸ್ಪತ್ರೆಗೆ ಅಲೆದಾಡುವುದೇ ಕೆಲಸವಾಗಿದೆ' ಎಂದು ಸ್ಥಳೀಯ ನಿವಾಸಿಗಳು ಬೇಸರ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಪುರಸಭೆ ಆಡಳಿತಕ್ಕೆ ಅನೇಕ ಬಾರಿ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ವಾರ್ಡ್ನಲ್ಲಿ ಎಲ್ಲಿ ನೋಡಿದರೂ ಕಸದ ರಾಶಿ, ತುಂಬಿದ ಚರಂಡಿಗಳನ್ನು ನೋಡುವಂತಾಗಿದೆ. ಪುರಸಭೆ ಆಡಳಿತದ ಅಧಿಕಾರಿಗಳ ಜಾಣಕುರುಡು ಪ್ರದರ್ಶನದಿಂದಾಗಿ ಜನರು ತೊಂದರೆ ಅನುಭವಿಸಬೇಕಾಗಿದೆ.
ವಾರ್ಡ್ನ ಹದಗೆಟ್ಟ ಸ್ಥಿತಿ ಬಗ್ಗೆ ಜನಪ್ರತಿನಿಧಿಗಳು ಎಚ್ಚೆತ್ತುಕೊಂಡು ಹೊಣೆಗಾರಿಕೆ ಪ್ರದರ್ಶಿಸುತ್ತಿಲ್ಲ. ವಾರ್ಡ್ನಲ್ಲಿ ಸಾವು ಸಂಭವಿಸಿದರೆ ಅದಕ್ಕೆ ಯಾರು ಹೊಣೆ? ಸಂಬಂಧಪಟ್ಟವರು ಇನ್ನಾದರೂ ಎಚ್ಚೆತ್ತುಕೊಳ್ಳಬೇಕು. ಇಲ್ಲದಿದ್ದರೆ ನಾವು ಹೋರಾಟದ ಹಾದಿ ತುಳಿಯುವುದು ಅನಿವಾರ್ಯ ಎಂದು ಸ್ಥಳೀಯರು ಎಚ್ಚರಿಕೆ ನೀಡಿದ್ದಾರೆ.