ಗೌರಿಬಿದನೂರು: ತಾಲೂಕಿನ ವಿದುರಾಶ್ವತ್ಥದಲ್ಲಿ 1938ರಲ್ಲಿ ಸ್ವಾತಂತ್ರ್ಯದ ಕಿಚ್ಚು ಪ್ರಾರಂಭವಾಗಿತ್ತು. ಅಂದು ಪ್ರಾಣ ತೆತ್ತ ಹೋರಾಟಗಾರರ ಬದುಕು ನಮಗೆ ಅದರ್ಶವಾಗಬೇಕು ಎಂದು ಸಿಎಂ ಬಿ.ಎಸ್.ಯಡಿಯೂರಪ್ಪ ಹೇಳಿದರು.
ತಾಲೂಕಿನ ವಿದುರಾಶ್ವತ್ಥ ಕ್ಷೇತ್ರದ ನಾಗಿರೆಡ್ಡಿ ಸಭಾಂಗಣದಲ್ಲಿ ರಾಜ್ಯ ಸರ್ಕಾರ ಮತ್ತು ಜಿಲ್ಲಾಡಳಿತ ಆಯೋಜಿಸಿದ್ದ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ -2021 ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಸಿಎಂ, ಈ ಭಾಗದ ವಿದುರಾಶ್ವತ್ಥದಲ್ಲಿ 1938ರಲ್ಲಿ ಸ್ವಾತಂತ್ರ್ಯದ ಕಿಚ್ಚು ಪ್ರಾರಂಭವಾಗಿತ್ತು. ಅಂದು ಸುಮಾರು 38 ಜನ ಪ್ರಾಣ ತೆತ್ತರು. ಅವರ ಬಲಿದಾನ ಇಡೀ ದೇಶದಲ್ಲಿ ಸಂಚಲನ ಮೂಡಿಸಿತ್ತು. ಇಂತಹ ಸ್ಥಳವನ್ನು ಐತಿಹಾಸಿಕ ಸ್ಥಳವನ್ನಾಗಿ ಮಾರ್ಪಾಡಿಸಲು ಸರ್ಕಾರದಿಂದ ಇಡಿಸಿ ಎಂಬ ಯೋಜನೆ ಅಡಿಯಲ್ಲಿ 16 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ದಿಗೆ ಒಪ್ಪಿಗೆ ನೀಡಲಾಗಿದೆ ಎಂದರು.
ಬಳಿಕ ಮಾತನಾಡಿದ ರಾಜ್ಯಪಾಲ ವಜುಭಾಯಿ ವಾಲ, ವಿದುರಾಶ್ವತ್ಥವು ದೇಶದ ಎರಡನೇ ಜಲಿಯನ್‌ವಾಲಾಬಾಗ್ ಎಂದು ಪ್ರಸಿದ್ದ ಪಡೆದಿದೆ. 1938ರಲ್ಲಿ ಸ್ವಾತಂತ್ರ್ಯಕ್ಕಾಗಿ ಸುಮಾರು 38 ಜನ ಈ ಭಾಗದಲ್ಲಿ ತಮ್ಮ ಪ್ರಾಣ ಬಲಿದಾನ ಮಾಡಿದ್ದಾರೆ. ಇವರ ಆದರ್ಶಗಳು ನಮಗೆ ಮತ್ತು ಇಂದಿನ ಯುವಕರಿಗೆ ಸ್ಫೂರ್ತಿಯಾಗಬೇಕು, ಶಾಲಾ ಕಾಲೇಜುಗಳಲ್ಲಿ ಇದರ ಬಗ್ಗೆ ತಿಳಿಸುವ ಕಾರ್ಯಕ್ರಮ ಆಗಬೇಕಿದೆ ಎಂದರು.