ಚಿತ್ರದುರ್ಗ: ಜಿಲ್ಲೆಯ ಹಿರಿಯೂರು ತಾಲೂಕಿನಲ್ಲಿ ಶೇಷಪ್ಪನಹಳ್ಳಿ ಎಂಬ ಗ್ರಾಮವಿದ್ದು, ಸ್ವಾತಂತ್ರ್ಯ ಪೂರ್ವದಿಂದಲೂ ಅಲ್ಲಿನ ರಸ್ತೆಗಳು ಕಾಂಕ್ರೀಟ್ ಕಾಣದೆ ಹಾಗೇ ಉಳಿದಿವೆ.
ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಮುಂದೆ ರಸ್ತೆ ಅಭಿವೃದ್ಧಿಗಾಗಿಯೇ ಸಾಕಷ್ಟು ಯೋಜನೆಗಳಿದ್ದರೂ ಅಧಿಕಾರಿಗಳ ಬೇಜವಾಬ್ದಾರಿಯಿಂದಾಗಿ ಗ್ರಾಮಕ್ಕೆ ಸರಿಯಾದ ರಸ್ತೆಗಳಿಲ್ಲದಂತಾಗಿದೆ. ರಸ್ತೆ ಅಭಿವೃದ್ಧಿಗಾಗಿಯೇ ಯೋಜನೆಗಳಿವೆ. ಅದರೆ ಈ ಯೋಜನೆಗಳು ಶೇಷಪ್ಪನಹಳ್ಳಿಗೆ ಮರೀಚಿಕೆಯಂತಾಗಿವೆ ಎಂಬುದು ಗ್ರಾಮದ ಯುವಕರ ಆಕ್ರೋಶಕ್ಕೆ ಕಾರಣವಾಗಿದೆ.
ಸರಿಯಾದ ರಸ್ತೆಗಳಿಲ್ಲದೆ ಹೈರಾಣಾದ ಈ ಗ್ರಾಮದ ಯುವಕರು ಅದೆಷ್ಟೋ ಬಾರಿ ಈ ವಿಚಾರವನ್ನು ಜನಪ್ರತಿನಿಧಿಗಳ ಗಮನಕ್ಕೆ ತಂದ್ರೂ ಯಾವುದೇ ಪ್ರಯೋಜನವಾಗಿಲ್ಲವಂತೆ. ಇದರಿಂದ ಬೇಸತ್ತ ಗ್ರಾಮದ ಕಿರಣ್ ಎಂಬ ಯುವಕ ಪ್ರಧಾನಮಂತ್ರಿ ಕಚೇರಿಗೆ ದೂರು ನೀಡಿದ್ದ. ದೂರಿಗೆ ಸ್ಪಂದಿಸಿದ ಪ್ರಧಾನಿ ಮೋದಿಯವರ ಕಾರ್ಯಾಲಯ, ಸೂಕ್ತ ಕ್ರಮ ಕೈಗೊಳ್ಳುವಂತೆ ಸಂಬಂಧಪಟ್ಟ ಇಲಾಖೆಗೆ ಸೂಚನೆ ನೀಡಿ ಆದೇಶದ ಪ್ರತಿ ಕಳುಹಿಸಿತ್ತು. ಆದರೆ ಅಧಿಕಾರಿಗಳು ಮಾತ್ರ ಇದಕ್ಕೂ ಜಪ್ಪಯ್ಯ ಎಂದಿಲ್ಲವಂತೆ.
ಪ್ರಧಾನಿ ಆದೇಶಕ್ಕೂ ಅಲ್ಲಿನ ಅಧಿಕಾರಿಗಳು, ಜನಪ್ರತಿನಿಧಿಗಳು ಕಿಮ್ಮತ್ತು ನೀಡದೆ ಇದ್ದಿದ್ದರಿಂದ ಆಕ್ರೋಶಗೊಂಡ ಯುವಕ, ಪ್ರಧಾನಿ ಕಚೇರಿಯಿಂದ ಬಂದ ಪತ್ರವನ್ನು ಮೋದಿ ಹಾಗೂ ಸಿಎಂ ಯಡಿಯೂರಪ್ಪನವರಿಗೆ ಟ್ಯಾಗ್ ಮಾಡಿ ಟ್ವೀಟ್ ಮಾಡಿ ಇತ್ತ ಗಮನಹರಿಸುವಂತೆ ಮನವಿ ಮಾಡಿದ್ದಾನೆ.