ಚಿಕ್ಕಬಳ್ಳಾಪುರ: ಪುರಾಣ ಪ್ರಸಿದ್ಧ ಐತಿಹಾಸಿಕ ಯೋಗ ಮತ್ತು ಭೋಗ ನಂದೀಶ್ವರ ದೇವಾಲಯ ದಕ್ಷಿಣ ಕಾಶಿ ಎಂದೇ ಖ್ಯಾತಿ ಪಡೆದಿದೆ. ಪ್ರತಿ ವರ್ಷ ಮಹಾಶಿವರಾತ್ರಿಗೆ ದೇವಾಲಯದ ಜೋಡಿ ಕಲ್ಲಿಗಾಲಿಗಳ ರಥೋತ್ಸವ ನಡೆಯುತ್ತದೆ. ಇದು ದೇವಾಲಯದ ಕಳಶಪ್ರಾಯ ಕಾರ್ಯಕ್ರಮ. ಈ ರಥೋತ್ಸವ ವೀಕ್ಷಿಸಲು ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಸೇರುತ್ತಾರೆ. ಆದರೆ ಇದೇ ಮೊದಲ ಬಾರಿಗೆ ಜೋಡಿ ಕಲ್ಲುಗಾಲಿ ರಥ ಮುರಿದು ಬಿದ್ದು ಅವಘಡ ಸಂಭವಿಸಿದೆ.
ಚಿಕ್ಕಬಳ್ಳಾಪುರ ಬಯಲು ಸೀಮೆ ಜಿಲ್ಲೆ. ಇಲ್ಲಿ ಯಾವುದೇ ನದಿ ನಾಲೆಗಳಿಲ್ಲದೇ ಬರದ ನಾಡು ಎಂಬ ಕುಖ್ಯಾತಿ ಪಡೆದಿದೆ. ಆದರೆ ಇತ್ತೀಚೆಗೆ ಬೆಂಗಳೂರು ಕೊಳಚೆ ನೀರು ಶುದ್ಧೀಕರಿಸಿ ಜಿಲ್ಲೆಯ ಹಲವು ಕೆರೆಗಳನ್ನು ತುಂಬಿಸಲಾಗಿದೆ. ಈ ಭಾಗದ ಧಾರ್ಮಿಕ ದೇವಾಲಯಗಳಲ್ಲಿ ವಿಶ್ವ ಪ್ರಸಿದ್ಧಿ ಹೊಂದಿರುವ ನಂದಿ ಯೋಗ ಮತ್ತು ಭೋಗ ನಂದೀಶ್ವರ ದೇವಾಲಯ ಇದೆ. ಯೋಗ ನಂದೀಶ್ವರ ನಂದಿ ಬೆಟ್ಟದಲ್ಲಿ ನೆಲೆಸಿದ್ದರೆ, ಭೋಗ ನಂದೀಶ್ವರ ಬೆಟ್ಟದ ತಪ್ಪಲು ನಂದಿ ಗ್ರಾಮದಲ್ಲಿ ನೆಲೆಸಿದ್ದಾನೆ.
ಒಂದು ರಥದ ಗಾಲಿ ಮುರಿದು ಅವಘಡ: ಕೋಟ್ಯಂತರ ರೂಪಾಯಿ ಖರ್ಚು ಮಾಡಿ ಕಾರ್ಯ ಕ್ರಮಗಳನ್ನು ನಡೆಸಿದ್ದರು. ಆದರೆ ತೇರು ಎಳೆದ ಕೆಲವೇ ನಿಮಿಷಗಳಲ್ಲಿ ಪಾರ್ವತಿ ಸಮೇತ ಭೋಗ ನಂದೀಶ್ವರನ ಮೆರವಣಿಗೆ ವಿಗ್ರಹಗಳನ್ನ ಹೊತ್ತಿದ್ದ ದೊಡ್ಡ ರಥದ ಕಲ್ಲುಗಾಲಿ ಮುರಿದು ನೆರೆದಿದ್ದ ಭಕ್ತರಲ್ಲಿ ಆತಂಕ ಮೂಡಿಸಿತ್ತು. ನಂತರ ಮುಂದಕ್ಕೆ ಹೋಗಲಾಗದೆ ರಥದಲ್ಲಿದ್ದ ಮೆರವಣಿಗೆ ವಿಗ್ರಹಗಳನ್ನು ಚಿಕ್ಕರಥಕ್ಕೆ ಸಾಗಿಸಿ ಒಂಟಿ ರಥದಲ್ಲಿಯೇ ದೇವಾಲಯ ಪ್ರದಕ್ಷಿಣೆ ಹಾಕಿಸಿದರು.
ಇದನ್ನು ಓದಿ: ಅದ್ಧೂರಿಯಾಗಿ ನೆರವೇರಿದ ಸಿದ್ಧಾರೂಢರ ರಥೋತ್ಸವ.. ಹುಬ್ಬಳ್ಳಿಯಲ್ಲಿ ಮೊಳಗಿತು ಶಿವ ನಾಮಸ್ಮರಣೆ