ಚಿಂತಾಮಣಿ: ತಾಲೂಕಿನ ಕೈವಾರ ಕ್ರಾಸ್ ಬಳಿ ವಿದ್ಯಾರ್ಥಿಗೆ ಕೆಎಸ್ಆರ್ಟಿಸಿ ಚಾಲಕನೊಬ್ಬ ಕಪಾಳ ಮೋಕ್ಷ ಮಾಡಿದ್ದಾರೆ ಎಂದು ಆರೋಪಿಸಿ ಕೆಎಸ್ಆರ್ಟಿಸಿ ಘಟಕದ ಮುಂದೆ ಚಾಲಕನ ವಿರುದ್ಧ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು.
ಹಿರೇಪಾಳ್ಯ ಗ್ರಾಮದ ಮನೋಜ್ ಶಿಡ್ಲಘಟ್ಟ ಸರ್ಕಾರಿ ಐಟಿಐ ವಿದ್ಯಾರ್ಥಿ ಮತ್ತು ಆತನ ಸ್ನೇಹಿತರು ಕೈವಾರ ಕ್ರಾಸ್ ಬಳಿ ಕಾಲೇಜಿಗೆ ಹೋಗಲು ಬಸ್ ಅನ್ನು ನಿಲ್ಲಿಸಲು ಕೈ ಸನ್ನೆ ಮಾಡಿದ್ದಾರೆ. ಈ ವೇಳೆ, ಬಸ್ ಚಾಲಕ ವಿದ್ಯಾರ್ಥಿಗೆ ಕಪಾಳಮೋಕ್ಷ ಮಾಡಿದ್ದಾನೆ. ಇದೇ ಕಾರಣಕ್ಕೆ ಕೋಪಗೊಂಡ ಸುಮಾರು 100 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಚಿಂತಾಮಣಿ ಬಸ್ ಘಟಕದ ಮುಂದೆ ಕೂಡಲೇ ವ್ಯವಸ್ಥಾಪಕರು ಚಾಲಕನ ವಿರುದ್ಧ ಕ್ರಮ ಜರುಗಿಸಬೇಕೆಂದು ಅಗ್ರಹಿಸಿ ಪ್ರತಿಭಟಿಸಿದರು.
ವ್ಯವಸ್ಥಾಪಕರು ಇಂದು ರಜೆಯಲ್ಲಿದ್ದ ಕಾರಣ ಘಟಕದ ಸಿಬ್ಬಂದಿ ವಿದ್ಯಾರ್ಥಿಗಳಿಗೆ ಸಮಜಾಯಿಸಿ ನೀಡಲು ಮುಂದಾದರು. ಆದರೆ, ವಿದ್ಯಾರ್ಥಿಗಳು ಅವರ ಮಾತು ಕೇಳದೇ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ನಂತರ ಪೊಲೀಸರು ಮಧ್ಯಪ್ರವೇಶಿಸಿ ವಿದ್ಯಾರ್ಥಿಗಳ ಮನವೊಲಿಸಿ ಇನ್ನು ಮುಂದೆ ಈ ರೀತಿ ಆಗುವುದಿಲ್ಲ ಎಂದು ವಾಪಸ್ ಕಳುಹಿಸಿದರು.