ಚಿಕ್ಕಬಳ್ಳಾಪುರ: ಖಾಸಗಿ ಶಾಲೆಯಲ್ಲಿ ಶುಲ್ಕ ಪಾವತಿಸದ ಹಿನ್ನೆಲೆ ವಿದ್ಯಾರ್ಥಿಗೆ ಕಿರುಕುಳ ನೀಡುತ್ತಿದ್ದು, ಶಾಲೆಯ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವಂತೆ ವಿದ್ಯಾರ್ಥಿಯೊಬ್ಬ ಶಿಕ್ಷಣ ಸಚಿವರಿಗೆ ಲೈವ್ ವಿಡಿಯೋ ಮೂಲಕ ಮನವಿ ಮಾಡಿದ ಘಟನೆ ಜಿಲ್ಲೆಯ ಗೌರಿಬಿದನೂರಿನಲ್ಲಿ ನಡೆದಿದೆ.
ಗೌರಿಬಿದನೂರು ತಾಲೂಕಿನ ಪ್ರತಿಷ್ಠಿತ ಶಾಲೆಯಾದ ವಿದ್ಯಾನಿಧಿ ಖಾಸಗಿ ಶಾಲೆಯಲ್ಲಿ 9ನೇ ತರಗತಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಯೊಬ್ಬ ಶಾಲೆಗೆ ಹಣ ಪಾವತಿಸದ ಹಿನ್ನೆಲೆ ನಿತ್ಯ ಶಾಲೆಯಲ್ಲಿ ಅವಮಾನ, ಕಿರುಕುಳ ನೀಡುತ್ತಿದ್ದಾರೆ. ಹೀಗಾಗಿ ಶಾಲೆಯ ಆಡಳಿತ ಮಂಡಳಿ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವಂತೆ ಶಿಕ್ಷಣ ಸಚಿವರಿಗೆ ಲೈವ್ ವಿಡಿಯೋ ಮಾಡುವುದರ ಮೂಲಕ ಬಾಲಕ ಮನವಿ ಮಾಡಿಕೊಂಡಿದ್ದಾನೆ.
ವಿದ್ಯಾರ್ಥಿ ಮಾಡಿರುವ ಲೈವ್ ವಿಡಿಯೋದಲ್ಲಿ ನಮ್ಮ ಶಾಲೆಯ ಸೆಕ್ರೆಟರಿ ಮಧುಸೂದನ್ ಮತ್ತು ಕ್ಲಾಸ್ ಟೀಚರ್ ಎಲ್ಲ ಸ್ನೇಹಿತರ ಮುಂದೆ ನನಗೆ ಅವಮಾನ ಮಾಡುತ್ತಾರೆ. ನಮ್ಮ ಅಪ್ಪನ ಬಳಿ ಹಣದ ಕೊರತೆ ಇದೆ. ಸಾಧ್ಯವಾದಷ್ಟು ಬೇಗ ಹಣ ಕೊಡುವುದಾಗಿ ಹೇಳಿದರೂ ಕೂಡ ಕಿರುಕುಳ ನೀಡುತ್ತಿದ್ದಾರೆ. ಹಾಗಾಗಿ ಆದಷ್ಟು ಬೇಗ ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲೂಕಿನ ವಿದ್ಯಾನಿಧಿ ಶಾಲೆಯ ವಿರುದ್ಧ ಕ್ರಮ ಕೈಗೊಂಡು ನಿಗಾ ವಹಿಸಬೇಕು ಎಂದು ಕೇಳಿಕೊಂಡಿದ್ದಾನೆ.