ಚಿಕ್ಕಬಳ್ಳಾಪುರ: ವಾಯುಮಾಲಿನ್ಯದಂತೆ ಶಬ್ದ ಮಾಲಿನ್ಯವೂ ಇದೆ. ಇದನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಸರಕಾರ ಕ್ರಮ ಕೈಗೊಳ್ಳಲು ಮುಂದಾಗಿದೆ. ಅದನ್ನು ಹೊರತುಪಡಿಸಿ ಯಾವುದೇ ಧರ್ಮವನ್ನು ಹತ್ತಿಕ್ಕುವ ಅಥವಾ ನೋವುಂಟು ಮಾಡುವ ಉದ್ದೇಶ ಸರಕಾರಕ್ಕೆ ಇಲ್ಲ ಎಂದು ಆರೋಗ್ಯ ಸಚಿವ ಕೆ.ಸುಧಾಕರ್ ಹೇಳಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಅವರು, ಧ್ವನಿವರ್ಧಕದ ಬಗೆಗಿನ ವಿವಾದ ಬಹಳ ವರ್ಷಗಳಿಂದ ನಡೆಯುತ್ತಿದೆ. ಧ್ವನಿ ವರ್ಧಕಗಳ ಬಳಕೆಗೆ ಸಂಬಂಧಿಸಿದಂತೆ ನ್ಯಾಯಾಲಯಗಳಲ್ಲಿ ವಾದ-ಪ್ರತಿವಾದಗಳು ನಡೆದಿವೆ. ಈ ಬಗ್ಗೆ ಹಲವು ನಿರ್ದೇಶನಗಳಿವೆ. ಶಬ್ದಮಾಲಿನ್ಯವೂ ಇಷ್ಟು ಡೆಸಿಬಲ್‌ಗಿಂತ ಕಡಿಮೆ ಇರಬೇಕು ಎಂಬ ನಿಯಮವಿರುವುದಾಗಿ ಇದೇ ವೇಳೆ ಹೇಳಿದ್ದಾರೆ.
ಕೋಮು ಸಾಮರಸ್ಯವನ್ನು ಕದಡುವ ಮೂಲಕ ಬಿಜೆಪಿಯವರು ಶ್ರೀಲಂಕಾ ಪರಿಸ್ಥಿತಿಯನ್ನು ಕರ್ನಾಟಕದಲ್ಲಿ ನಿರ್ಮಿಸುತ್ತಿದ್ದಾರೆ ಎಂಬ ಕುಮಾರಸ್ವಾಮಿಯವರ ಆರೋಪಕ್ಕೆ ಪ್ರತಿಕ್ರಿಯಿಸಿರುವ ಸಚಿವರು, ಶ್ರೀಲಂಕಾದಲ್ಲಿ ಆರ್ಥಿಕ ದಿವಾಳಿತನದಿಂದಾಗಿ ಈ ಪರಿಸ್ಥಿತಿ ನಿರ್ಮಾಣವಾಗಿರುವುದು. ಈ ಬಗ್ಗೆ ಅವರು ತಿಳಿದುಕೊಳ್ಳುವುದು ಒಳ್ಳೆಯದು ಎಂದು ಹೇಳಿದ್ದಾರೆ.
ಅಮಿತ್ ಶಾ ಭೇಟಿ ಕುರಿತು ಪ್ರತಿಕ್ರಿಯಿಸಿರುವ ಸಚಿವರು, ರಾಜ್ಯಕ್ಕೆ ಅಮಿತ್ ಶಾ ಬಂದು ಹೋದ ಮೇಲೆ ರಾಜ್ಯ ಬಿಜೆಪಿಯ ಉತ್ಸಾಹ ಹೆಚ್ಚಿದೆ. ಅದೇ ರೀತಿ ಮೋದಿಯವರು ಬಂದರೆ ಮತ್ತಷ್ಟು ಉತ್ಸಾಹ ಲವಲವಿಕೆ ಬರಲಿದೆ ಎಂದು ಹೇಳಿದ್ದಾರೆ. ಬಿಜೆಪಿಯಲ್ಲಿ ನನಗೆ ಯಾವ ಹುದ್ದೆ ನೀಡಿದರೂ ನಿಭಾಯಿಸಲು ನಾನು ಸಿದ್ದ ಎಂದು ಇದೇ ವೇಳೆ ಹೇಳಿದ್ದಾರೆ.
ಇದನ್ನೂ ಓದಿ :ಆಧಾರ್‌ನಲ್ಲಿ ಮಗುವಿನ ಹೆಸರು 'ಮಧುವಿನ ಐದನೇ ಮಗು'!: ಸಿಬ್ಬಂದಿಯ ನಿರ್ಲಕ್ಷ್ಯಕ್ಕೆ ಏನನ್ನಬೇಕು?