ಚಿಕ್ಕಬಳ್ಳಾಪುರ: ಅಂಗನವಾಡಿ ಕೇಂದ್ರಗಳ ಅಭಿವೃದ್ಧಿ, ಮಕ್ಕಳ ಪೌಷ್ಟಿಕ ಬೆಳವಣಿಗೆ, ಗರ್ಭಿಣಿ ಮತ್ತು ಬಾಣಂತಿಯರ ಮಾಹಿತಿ ಕಲೆ ಹಾಕಲು ಅಂಗನವಾಡಿಗಳಿಗೆ ಸ್ಮಾರ್ಟ್‌ಪೋನ್ ಭಾಗ್ಯ ನೀಡಲಾಗುತ್ತಿದೆ. ಆದರೆ, ಈ ಯೋಜನೆ ಹಳ್ಳಿ ಕಡೆ ಎಷ್ಟರ ಮಟ್ಟಿಗೆ ಯಶಸ್ವಿಯಾಗಲಿದೆ ಎಂಬುದು ಕಾದು ನೋಡಬೇಕಿದೆ.
ಕೇಂದ್ರ ಸರ್ಕಾರ ಮಹಿಳೆಯರ ಮತ್ತು ಮಕ್ಕಳ ಕಲ್ಯಾಣ ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿ ಅನುಷ್ಟಾನಗೊಳಿಸುವ ಜೊತೆಗೆ ಅಪೌಷ್ಟಿಕತೆ, ರಕ್ತಹೀನತೆಯಿಂದ ಮಕ್ಕಳ ಮತ್ತು ಮಹಿಳೆಯರ ಸಾವಿನ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿ ಜಿಲ್ಲೆಯಲ್ಲಿ ಇರುವ 1,961 ಅಂಗನವಾಡಿಗಳಿಗೆ ಸ್ಮಾರ್ಟ್ ಫೋನ್‌ಗಳನ್ನು ನೀಡಿ ಮಾಹಿತಿ ಕೇಂದ್ರಗಳಾನ್ನಾಗಿ ಪರಿವರ್ತಿಸಲು ಯತ್ನಿಸುತ್ತಿದೆ.
ಸ್ಮಾರ್ಟ್ ಫೋನ್‌ಗಳ ಮುಖಾಂತರ ಮಕ್ಕಳ ವಿವರ, ತೂಕ, ಎತ್ತರ, ನೀಡಿದ ಆಹಾರ ಮತ್ತು ವ್ಯಾಪ್ತಿಯಲ್ಲಿರುವ ಗರ್ಭಿಣಿ, ಬಾಣಂತಿಯರ ವಿವರಗಳನ್ನು ಸ್ಮಾಟ್‌ನ ಸ್ನೇಹ ಆ್ಯಪ್ ಮುಖಾಂತರ ದಾಖಲಿಸಲಾಗುತ್ತದೆ. ಆದರೆ ಬಹುತೇಕ ಅಂಗನವಾಡಿಗಳು ಹಳ್ಳಿಗಳ ಕಡೆ ಇರುವುದರಿಂದ ಸ್ಮಾರ್ಟ್‌ಫೋನ್ ಎಷ್ಟರ ಮಟ್ಟಿಗೆ ಕಾರ್ಯ ನಿರ್ವಹಿಸಲಿದೆ ಎಂಬುದು ಪ್ರಶ್ನೆಯಾಗಿದೆ.
ಸ್ಮಾರ್ಟ್ ಫೋನ್ ನೀಡಲು ಇಲಾಖೆ ನಿರ್ಧಾರ ಮಾಡಿರುವುದು ಸಂತೋಷದ ವಿಷಯ ಆದರೆ, ಸ್ಮಾರ್ಟ್ಫೋನ್ನಿಂದ ಬರುವ ತಾಂತ್ರಿಕ ದೋಷಗಳ ಬಗ್ಗೆ ಸರ್ಕಾರ ಆಲೋಚಿಸಬೇಕಿದೆ. ಶೇಕಡ 50 ರಷ್ಟು ಅಂಗನವಾಡಿ ಕಾರ್ಯಕರ್ತೆಯರ ಬಳಿ ಸ್ಮಾರ್ಟ್ ಫೋನ್ ಇಲ್ಲ. ಬೇರೆಯವರ ಬಳಿ ಮಾಹಿತಿ ತಿಳಿದುಕೊಂಡು ನಂತರ ಅಪ್ಡೇಟ್ ಮಾಡಲಾಗುತ್ತಿದೆ. ಅಷ್ಟೇ ಅಲ್ಲದೆ ಮೊಬೈಲ್ ಕೊಟ್ಟ ನಂತರ ಸಿಮ್ ,ಕರೆನ್ಸಿ ಸೇರಿದಂತೆ ತಾಂತ್ರಿಕ ದೋಷಗಳ ಬಗ್ಗೆ ಕಾರ್ಯಕರ್ತೆಯರು ಸರಿಪಡಿಸಲು ಸಾಧ್ಯವಾಗುವುದಿಲ್ಲ.
ಈ ಕುರಿತು ಮಾತನಾಡಿದ ಸಿಐಟಿಯುನ ಜಿಲ್ಲಾ ಅಧ್ಯಕ್ಷೆ ಲಕ್ಷ್ಮಿದೇವಮ್ಮ, ಕಳಪೆ ಗುಣಮುಟ್ಟದ ಆಹಾರ ಪೂರೈಕೆಯ ಬಗ್ಗೆ ಮಾತಾನಾಡಿ ಇದರಲ್ಲಿ ಅಂಗನವಾಡಿ ಕಾರ್ಯಕರ್ತೆಯರನ್ನು ದೂಷಿಸಿದರೆ ಸೂಕ್ತವಾಗುವುದಿಲ್ಲ. ಇಲಾಖೆ ಏನನ್ನು ಪೂರೈಸುತ್ತದೆಯೂ ಅದನ್ನು ನಾವು ವಿತರಿಸುತ್ತೇವೆ. ಈ ಹಿಂದೆ ಸಾಕಷ್ಟು ಆರೋಪಗಳು ಕೇಳಿ ಬಂದಿತ್ತು. ಆದರೆ, ಈಗ ಇಲಾಖೆಯೂ ಸಾಕಷ್ಟು ಬದಲಾವಣೆಯನ್ನು ತಂದಿದ್ದು ಸಮರ್ಪಕವಾಗಿ ವಿತರಣೆ ಮಾಡಲಾಗುತ್ತಿದೆ ಎಂದು ತಿಳಿಸಿದರು.