ಬಾಗೇಪಲ್ಲಿ: ಕೊರೊನಾ 2ನೇ ಅಲೆಯ ತೀವ್ರತೆಗೆ ಜನ ಸಾವು-ನೋವುಗಳನ್ನು ಅನುಭವಿಸುತ್ತಿದ್ದಾರೆ. ಕೋವಿಡ್ ವೈರಾಣು ಹರಡದಂತೆ ತಡೆಯಲು ಲಾಕ್ಡೌನ್ ಕೂಡ ಜಾರಿಯಲ್ಲಿದೆ. ಇದರಿಂದಾಗಿ ನಗರ, ಪಟ್ಟಣ ಪ್ರದೇಶಗಳಲ್ಲಿನ ಬಡ ಜನರ ಬದುಕಿನ ಮೇಲೆ ಭಾರಿ ಹೊಡೆತ ಬಿದ್ದಂತಾಗಿದೆ.
ಗ್ರಾಮೀಣ ಪ್ರದೇಶಗಳಲ್ಲಿ ಇದರ ತೀವ್ರತೆ ಕೊಂಚ ಕಡಿಮೆಯಾದರೂ ಜನತೆಗೆ ಅಗತ್ಯ ಸಾಮಗ್ರಿಗಳು ದೊರೆಯದೆ ಕಂಗಾಲಾಗಿದ್ದಾರೆ. ಬಹುತೇಕ ಗ್ರಾಮೀಣ ಜನರು ಹೈನುಗಾರಿಕೆಯನ್ನು ನಂಬಿಕೊಂಡಿದ್ದು, ಎಂದಿನಂತೆ ಹಸು, ಕುರಿ, ಮೇಕೆ ಸಾಕಾಣಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಆದರೆ ಸದ್ಯದ ಪರಿಸ್ಥಿತಿಯಲ್ಲಿ ಬಿಸಿಲಿನ ಬೇಗೆ ಮಾತ್ರ ಉಸಿರು ಕಟ್ಟುವಂತಿದೆ. ಮನೆಯಲ್ಲಿದ್ದರೆ ಫ್ಯಾನ್ ನಿರಂತರವಾಗಿ ತಿರುಗುತ್ತಿರಬೇಕು. ಹೊರಗಡೆ ಬಂದರೆ ಮರದ ಆಶ್ರಯ ಪಡೆಯಲೇಬೇಕು.
ಹೀಗಿದ್ದರೂ ಬಿಸಿಲಿನ ಝಳದ ಕಿರುಕುಳ ತಪ್ಪಿದ್ದಲ್ಲ. ಇನ್ನು ಕುರಿಗಾಹಿಗಳ ಪರಿಸ್ಥಿತಿಯಂತೂ ಪೂರ್ತಿ ಹದೆಗೆಟ್ಟಿದೆ. ದಿನಪೂರ್ತಿ ನೀರಿನ ಬಾಟಲಿಗಳನ್ನು ಹೆಗಲಿಗೆ ತಗಲಾಕಿಕೊಂಡು ಒಯ್ಯಲೇಬೇಕು. ಕುರಿಗಳಿಗೆ ರೋಗರುಜುನಗಳು ಹರಡದಂತೆ ನೋಡಿಕೊಳ್ಳಬೇಕು. ಅತಿಯಾದ ಬಿಸಿಲಿನ ಹೊಡೆತಕ್ಕೆ ಬೊಬ್ಬೆ ರೋಗ ಬರುವ ಸಂಭವವೂ ಜಾಸ್ತಿಯಿದೆ. ರೋಗ ಬಂದು ಸಾಯುವ ಕುರಿಗಳಿಗೂ ಸರ್ಕಾರದ ಪರಿಹಾರದ ನೆರವು ನಿಲ್ಲಿಸಲಾಗಿದೆ. ಹಾಗಾಗಿ ನಾನಾ ಪೀಕಲಾಟಗಳ ನಡುವೆ ಕುರಿ ಸಾಕಾಣಿಕೆ ಮಾಡಿಕೊಳ್ಳಬೇಕು. ಮಧ್ಯಾಹ್ನ 12 ರಿಂದ 3 ಗಂಟೆಯವರೆಗೂ ಮರಗಳಾಶ್ರಯ ಪಡೆಯಲೇಬೇಕಾಗಿದೆ.
ನಾವು ಹೆಚ್ಚಾಗಿ ಕುರಿ, ಮೇಕೆ ಮಂದೆಯನ್ನು ಹುಣಸೆ ಮರ ಅಥವಾ ಹೊಂಗೆ ಮರಗಳ ನೆರಳಲ್ಲಿ ನಿಲ್ಲಿಸುತ್ತೇವೆ. ಹೊಂಗೆ ಮರದ ನೆರಳು ತಂಪನ್ನು ಕೊಡುತ್ತಾ, ತಣ್ಣಗೆ ಗಾಳಿ ಬೀಸುತ್ತದೆ. ಹೀಗಾಗಿ ಮರಗಳನ್ನು ಬೆಳೆಸಿ ಸಂರಕ್ಷಿಸಬೇಕು ಎಂದು ಮಾಡಪಲ್ಲಿ ನಿವಾಸಿ ಶಿವಪ್ಪ ಹೇಳಿದರು.
ಓದಿ: ಕೋವಿಡ್ 3ನೇ ಅಲೆ ಸಾಧ್ಯತೆ : ಕ್ರಿಯಾ ಯೋಜನೆ, ಸಿದ್ಧತೆಗಳ ವರದಿ ಕೇಳಿದ ಹೈಕೋರ್ಟ್