ಬಾಗೇಪಲ್ಲಿ : ಕೊರೊನಾ ವೈರಸ್ ಭೀತಿ ನಡುವೆ ಇಲ್ಲಿ ಗ್ರಾಮೀಣ ಜನರ ಜೀವನಾಧಾರವಾಗಿರುವ ಕುರಿ-ಮೇಕೆಗಳಿಗೆ ರೋಗ ವಕ್ಕರಿಸಿ ಬಲಿ ಪಡೆಯುತ್ತಿದೆ.
ಪಿಟ್ಸ್, ನಾಲಗೆ ನೀಲಿ ತಿರುಗುವುದು, ಬೇಧಿ, ಬಿಸಿಲಿನ ತಾಪಕ್ಕೆ ಬೊಬ್ಬೆಗಳು ಈ ರೋಗದಲ್ಲಿ ಕಂಡು ಬರುತ್ತಿವೆ. ಹೀಗಾಗಿ ಕುರಿ-ಮೇಕೆಗಳನ್ನು ಸಾಕುತ್ತಿರುವ ರೈತರಲ್ಲಿ, ಕುರಿಗಾಹಿಗಳಲ್ಲಿ ಕೊರೊನಾಗಿಂತಲೂ ಹೆಚ್ಚು ಆತಂಕ ಸೃಷ್ಟಿಸುತ್ತಿದೆ. ಪ್ರತಿ ಕುರಿ ಮಂದೆಯಲ್ಲೂ ಎರಡು ಮೂರು ಕುರಿಗಳ ಬಲಿಯಾಗುತ್ತಿವೆ. ಕುರಿಗಾಹಿಗಳು ಸತ್ತ ಕುರಿಗಳನ್ನು ಪಾಳು ಬಿದ್ದ ಬಾವಿಗೆ ಎಸೆಯುವುದು. ಮೂಢ ನಂಬಿಕೆಯಿಂದಾಗಿ ರೋಗ ವಾಸಿಯಾಗಲೆಂದು ಮರಗಳಿಗೆ ನೇತು ಹಾಕುತ್ತಿದ್ದಾರೆ.

ಕುರಿಗಳಿಗೆ ಚಿಕಿತ್ಸೆ, ವಿಮಾ, ಪರಿಹಾರ ಸೇರಿ ವಿವಿಧ ಸೌಲಭ್ಯಗಳ ಕುರಿತು ಕುರಿಗಾಹಿಗಳಿಗೆ ಸರಿಯಾದ ಮಾಹಿತಿ ಇಲ್ಲ. ಈ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ರಮ ನಡೆಯದಿರುವುದು ಬೇಸರದ ಸಂಗತಿ. ಕುರಿಗಳ ಸಾವಿನಿಂದ ಲಕ್ಷಾಂತರ ರೂ. ನಷ್ಟವಾಗುತ್ತಿದೆ’ ಎಂದು ಕುರಿಗಾಹಿ ಮಾಡಪ್ಪಲ್ಲಿ ಲಕ್ಷ್ಮಿನರಸಪ್ಪ ಎಂಬುವರು ಅಳಲು ತೋಡಿಕೊಂಡರು.
ಈಗಲಾದರೂ ಕುರಿಗಳಿಗೆ ಕಾಡುವ ಸಾಂಕ್ರಾಮಿಕ ರೋಗಗಳ ಬಗ್ಗೆ ಪಶು ಇಲಾಖೆ ವೈದ್ಯರು ಮತ್ತು ಅಧಿಕಾರಿಗಳು ಜಾಗೃತಿ ಮೂಡಿಸಬೇಕಿದೆ. ಜೊತೆಗೆ ಸರ್ಕಾರದ ಸೌಲಭ್ಯಗಳ ಬಗ್ಗೆ ಜಾಹೀರಾತಿನ ಮೂಲಕ ಕುಗ್ರಾಮಗಳಲ್ಲಿ ಪ್ರಚಾರ ಮಾಡಬೇಕು ಎಂದು ಒತ್ತಾಯಿಸಿದರು.