ಚಿಂತಾಮಣಿ : ಅಕ್ರಮವಾಗಿ ದಾಸ್ತಾನು ಮಾಡಲು ಬಂದಿದ್ದ ಅನ್ನಭಾಗ್ಯದ ಅಕ್ಕಿ ತುಂಬಿದ ಲಾರಿಯೊಂದನ್ನು ನಿವೃತ್ತ ಸೈನಿಕ ತಡೆದು ಅಧಿಕಾರಿಗಳಿಗೆ ಮಾಹಿತಿಕೊಟ್ಟ ಘಟನೆ ಜಿಲ್ಲೆಯ ಚಿಂತಾಮಣಿ ನಗರದಲ್ಲಿ ನಡೆದಿದೆ.
ಚಿಂತಾಮಣಿ ನಗರದ ಎಪಿಎಂಸಿ ಮಾರುಕಟ್ಟೆ ಬಳಿಯ ರೈಸ್ ಮಿಲ್ ಬಳಿ ಲಾರಿ ನಿಲ್ಲಿಸಲಾಗಿತ್ತು. ಈ ವೇಳೆ ನಿವೃತ್ತ ಸೈನಿಕ ಶಿವಾನಂದರೆಡ್ಡಿ ಪರಿಶೀಲಿಸಿದಾಗ ಲಾರಿಯಲ್ಲಿ ಸುಮಾರು 50ಕ್ಕೂ ಅಧಿಕ ಅಕ್ಕಿ ಮೂಟೆಗಳನ್ನು ಅಕ್ರಮವಾಗಿ ದಾಸ್ತಾನು ಮಾಡುತ್ತಿರುವುದು ಬೆಳಕಿಗೆ ಬಂದಿದೆ.
ತದನಂತರ ಅಧಿಕಾರಿಗಳಿಗೆ ಮಾಹಿತಿ ಮುಟ್ಟಿಸಿದ್ದು, ಸ್ಥಳಕ್ಕೆ ಬಂದ ತಹಶೀಲ್ದಾರ್ ಡಿ. ಹನುಮಂತರಾಯಪ್ಪ ಹಾಗೂ ಆಹಾರ ಇಲಾಖೆ ಅಧಿಕಾರಿಗಳು ಪರಿಶೀಲನೆ ನಡೆಸಿ ಅಕ್ಕಿ ಮೂಟೆಗಳನ್ನು ವಶಪಡಿಸಿಕೊಂಡಿದ್ದಾರೆ.
ಇದೇ ವೇಳೆ ಮಾತನಾಡಿದ ಶಿವಾನಂದರೆಡ್ಡಿ, ಬಡವರಿಗೆ ಕೊಡುವ ಅಕ್ಕಿ, ಧಾನ್ಯಗಳು ಈ ರೀತಿ ಕಳ್ಳರ ಪಾಲಾಗುತ್ತಿರುವುದು ಬೇಸರದ ಸಂಗತಿಯಾಗಿದೆ. ಬಡವರಿಗೆ ಸಿಗುವ ಅಕ್ಕಿಯನ್ನು ದುರುಪಯೋಗ ಮಾಡಿಕೊಳ್ಳಬೇಡಿ ಎಂದು ಮನವಿ ಮಾಡಿದ್ದಾರೆ.