ಚಿಕ್ಕಬಳ್ಳಾಪುರ : ದೇಶದಾದ್ಯಂತ ಸ್ವಾತಂತ್ರ್ಯದ ಅಮೃತಹೋತ್ಸವವನ್ನು ಸಂಭ್ರಮದಿಂದ ಆಚರಿಸಲಾಗುತ್ತಿದೆ. ಈ ಸಂದರ್ಭದಲ್ಲಿ ದೇಶ ಕಾಯುವ ನಿವೃತ್ತ ಯೋಧರೊಬ್ಬರು ನ್ಯಾಯಕ್ಕಾಗಿ 75 ಕಿ ಮೀ ದೂರದ ಬೆಂಗಳೂರಿನ ಸಿಎಂ ನಿವಾಸದ ವರೆಗೂ ಪಾದಯಾತ್ರೆಗೆ ಮುಂದಾಗಿರುವ ಘಟನೆ ಚಿಂತಾಮಣಿ ತಾಲೂಕಿನ ಕೆಂದನಹಳ್ಳಿಯಲ್ಲಿ ನಡೆದಿದೆ.
ಹೀಗೆ ತನಗೆ ನ್ಯಾಯ ಒದಗಿಸಿ ಕೊಡುವಂತೆ ಪಾದಯಾತ್ರೆ ನಡೆಸುತ್ತಿರುವ ಮಾಜಿ ಸೈನಿಕನ ಹೆಸರು ಶಿವಾನಂದರೆಡ್ಡಿ. ಚಿಂತಾಮಣಿ ತಾಲೂಕಿನ ಅಂಬಾಜಿದುರ್ಗ ಹೋಬಳಿಯ ರಾಯನಹಳ್ಳಿ ಗ್ರಾಮದ ನಿವಾಸಿ. ಭಾರತೀಯ ಸೈನ್ಯದಲ್ಲಿ ಸೇವೆ ಸಲ್ಲಿಸಿ 2002 ನೇ ಇಸವಿಯಲ್ಲಿ ಕಾಶ್ಮೀರದ ಪೂಂಚ್ ಪ್ರದೇಶದಲ್ಲಿ ನಡೆದ ದಾಳಿಯಲ್ಲಿ ಕಾಲಿಗೆ ಪೆಟ್ಟು ಬಿದ್ದು ಸೇನೆಯಿಂದ ನಿವೃತ್ತಿ ಹೊಂದಿದ್ದಾರೆ.
ನಿವೃತ್ತಿ ಹೊಂದಿದ ಸೈನಿಕ ಶಿವಾನಂದ ರೆಡ್ಡಿಗೆ ಸರ್ಕಾರ ರಾಯಪ್ಪಲ್ಲಿ ಗ್ರಾಮದಲ್ಲಿ ಐದು ಎಕರೆ ಜಮೀನು ಮಂಜೂರು ಮಾಡುವಂತೆ ಆದೇಶ ನೀಡಿದ್ದು, ನಿವೃತ್ತಿ ಹೊಂದಿ 22 ವರ್ಷಗಳು ಕಳೆದರೂ ಭೂಮಿ ಮಂಜೂರಾಗಿಲ್ಲ. 22 ವರ್ಷಗಳಿಂದ ಕಚೇರಿಗಳಿಗೆ ಅಲೆದಾಡಿ ಬೇಸತ್ತಿರುವ ಯೋಧ ಬೆಂಗಳೂರಿನ ಸಿಎಂ ನಿವಾಸದವರೆಗೆ ಪಾದಯಾತ್ರೆಗೆ ಮುಂದಾಗಿದ್ದಾರೆ. ಜೊತೆಗೆ ಈ ಯೋಧನಿಗೆ ನ್ಯಾಯ ದೊರಕಿಸಿಕೊಡುವಂತೆ ಚಿಂತಾಮಣಿ ತಾಲೂಕಿನ ರೈತ ಸಂಘಗಳ ಮುಖಂಡರು ಒತ್ತಾಯಿಸಿದ್ದಾರೆ.
ಇನ್ನು ಮಾಜಿ ಸೈನಿಕ ಪಾದಯಾತ್ರೆಯ ಬಗ್ಗೆ ತಿಳಿದ ಚಿಂತಾಮಣಿ ತಾಲೂಕಿನ ತಹಸೀಲ್ದಾರ್ ಹನುಮಂತರಾಯಪ್ಪ ಸೇರಿದಂತೆ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪಾದಯಾತ್ರೆ ನಿಲ್ಲಿಸುವಂತೆ ಹೇಳಿದ್ದಾರೆ. ತಹಶೀಲ್ದಾರ್ ಮನವಿಗೆ ಸ್ಪಂದಿಸಿದ ಮಾಜಿ ಸೈನಿಕ ಶಿವಾನಂದರೆಡ್ಡಿ, ಇನ್ನು ಮೂರು ದಿನಗಳಲ್ಲಿ ನ್ಯಾಯ ದೊರಕಿಸಿಕೊಡದಿದ್ದಲ್ಲಿ ಮತ್ತೆ ಕೆಂದನಹಳ್ಳಿಯಿಂದ ಸಿಎಂ ನಿವಾಸಕ್ಕೆ ಪಾದಯಾತ್ರೆ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಓದಿ : ನಕ್ಷತ್ರ ಹೋರಿಯ ಹುಟ್ಟುಹಬ್ಬ..ಅಭಿಮಾನಿಗಳಿಂದ 13 ಕೆಜಿ ಕೇಕ್ ಕತ್ತರಿಸಿ ಸಂಭ್ರಮ