ಚಿಕ್ಕಬಳ್ಳಾಪುರ: ಸೀರೆ ಹಂಚುವ ವಿಚಾರಕ್ಕೆ ಎರಡು ಗುಂಪುಗಳ ನಡುವೆ ಗಲಾಟೆ ನಡೆದಿದ್ದು, ಗುಂಪು ಚದುರಿಸಲು ಹೋದ ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿದ ಘಟನೆ ಜಿಲ್ಲೆಯ ಗೌರಿಬಿದನೂರು ತಾಲೂಕಿನ ಅಲ್ಲಿಪುರದಲ್ಲಿ ನಡೆದಿದೆ.
ಸಮಾಜ ಸೇವಕ ಪುಟ್ಟಸ್ವಾಮಿಗೌಡ ಎಂಬುವವರ ಬೆಂಬಲಿಗರು ಯುಗಾದಿ ಹಬ್ಬದ ಪ್ರಯುಕ್ತ ಸೀರೆ ಹಂಚುತ್ತಿರುವ ವಿಚಾರದಲ್ಲಿ ಎರಡು ಗುಂಪುಗಳ ನಡುವೆ ಗಲಾಟೆ ನಡೆದು ಮಂಚೇನಹಳ್ಳಿ ಪೊಲೀಸರು ಮಧ್ಯಪ್ರವೇಶಿಸಿ ಸಮಾಧಾನ ಪಡಿಸಿದ್ದಾರೆ.
ನಂತರ ಇಂದು ಸಂಜೆ ಸಂತೆ ಬೀದಿಯ ಯುವಕನೋರ್ವ ಅಲ್ಲಿಪುರದ ಒಳಗಡೆ ಬಂದಿದ್ದು, ಹಳೇ ವೈಷಮ್ಯದ ಹಿನ್ನೆಲೆ ಕೆಲವರು ಆತನನ್ನು ಹಿಗ್ಗಾಮುಗ್ಗಾ ಥಳಿಸಿದ್ದಾರೆ ಎನ್ನಲಾಗಿದೆ. ಮಾಹಿತಿ ತಿಳಿದ ತಕ್ಷಣ ಸ್ಥಳಕ್ಕೆ ಸಿಪಿಐ ಎಸ್.ರವಿ ಮತ್ತು ಪಿಎಸ್ಐ ರಾಘವೇಂದ್ರ ಧಾವಿಸಿ ಪರಿಸ್ಥಿತಿ ಹತೋಟಿಗೆ ತರಲು ಯತ್ನಿಸಿದ್ದಾರೆ. ಆಗ ಪೊಲೀಸರ ಮೇಲೆ ಕಲ್ಲು ತೂರಲು ಪ್ರಾರಂಭಿಸಿದ್ದಾರೆ. ಆದರೂ ಪರಿಸ್ಥಿತಿ ನಿಯಂತ್ರಣಕ್ಕೆ ಬಾರದ ಕಾರಣ ಡಿವೈಎಸ್ಪಿ ರವಿಶಂಕರ್ ಹಾಗೂ ಪಿಎಸ್ಐಗಳಾದ ಅವಿನಾಶ್, ಮೋಹನ್ ಮತ್ತು ಸಿಬ್ಬಂದಿ ಧಾವಿಸಿ ಕಲ್ಲು ತೂರಾಟ ಮಾಡುತ್ತಿದ್ದವರನ್ನು ಚದುರಿಸಿ ಪರಿಸ್ಥಿತಿ ಹತೋಟಿಗೆ ತಂದಿದ್ದಾರೆ. ಸದ್ಯ ಚಿಕ್ಕಬಳ್ಳಾಪುರದ ನೂತನ ಎಸ್ಪಿ ಮಿಥುನ್ ಕುಮಾರ್ ಸ್ಥಳದಲ್ಲಿ ಬೀಡು ಬಿಟ್ಟಿದ್ದು, ಸ್ಥಳದಲ್ಲಿ 200ಕ್ಕೂ ಹೆಚ್ಚು ಪೊಲೀಸರನ್ನ ನಿಯೋಜಿಸಲಾಗಿದೆ.