ಚಿಕ್ಕಬಳ್ಳಾಪುರ : ಹೊಸ ವರ್ಷದಂದು ಮೋಜು ಮಸ್ತಿಗೆ ಎಂದು ನಂದಿ ಗಿರಿಧಾಮಕ್ಕೆ ಆಗಮಿಸುವ ಪ್ರವಾಸಿಗರಿಗೆ ಚಿಕ್ಕಬಳ್ಳಾಪುರ ಜಿಲ್ಲಾಡಳಿತ ನಿರಾಸೆ ಮೂಡಿಸಿದೆ. ಡಿಸೆಂಬರ್ 31 ರಿಂದ ಜನವರಿ 1ರ ಸಂಜೆವರೆಗೂ ಡಿಸಿ ಪಿ.ಎನ್ ರವೀಂದ್ರ ನಿಷೇಧಾಜ್ಞೆ ಜಾರಿಗೊಳಿಸಿದ್ದಾರೆ.
ನೂತನ ವರ್ಷಾಚರಣೆಗೆ ಚಿಕ್ಕಬಳ್ಳಾಪುರ ತಾಲೂಕಿನ ವಿಶ್ವವಿಖ್ಯಾತ ನಂದಿ ಹಿಲ್ಸ್ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿದೆ. ಡಿಸೆಂಬರ್ 31 ರ ಸಂಜೆ 6 ಗಂಟೆಯಿಂದ ಜನವರಿ 1, 2024 ರ ಬೆಳಗ್ಗೆ 6 ಗಂಟೆವರೆಗೂ ನಿಷೇಧ ಮಾಡಲಾಗಿದ್ದು, ಹೊಸ ವರ್ಷಾಚರಣೆಯಲ್ಲಿ ಯಾವುದೆ ಅಹಿತಕರ ಘಟನೆಗಳು ನಡೆಯದಂತೆ ಮುಂಜಾಗ್ರತ ಕ್ರಮವಾಗಿ ನಿರ್ಣಯ ಕೈಗೊಳ್ಳಲಾಗಿದೆ. ಹೊಸ ವರ್ಷಾಚರಣೆಗೆ ನಂದಿ ಬೆಟ್ಟಕ್ಕೆ ಯಾರು ಬಾರಬಾರದು ಎಂದು ಜಿಲ್ಲಾಧಿಕಾರಿ ರವೀಂದ್ರ ಮನವಿ ಮಾಡಿದ್ದಾರೆ.
ನಂದಿ ಗಿರಿಧಾಮದಲ್ಲಿ ಹೊಸ ವರ್ಷ ಎಂಜಾಯ್ ಮಾಡಲು ಪ್ರಕೃತಿ ಪ್ರಿಯರು ಈಗಾಗಲೇ ಸಾಕಷ್ಟು ಪ್ಲಾನ್ ಮಾಡಿಕೊಂಡಿದ್ದರು. ಆದರೆ, ಇದೀಗ ಜಿಲ್ಲಾಡಳಿತ ಶಾಕ್ ಕೊಟ್ಟಿದ್ದು ಹಿಡಿ ಶಾಪ ಹಾಕುತ್ತಿದ್ದಾರೆ. ಅಷ್ಟೆ ಅಲ್ಲದೇ, ಪೊಲೀಸ್ ಇಲಾಖೆ ಹಲವು ಕಟ್ಟುನಿಟ್ಟಿನ ಸೂಚನೆಗಳನ್ನು ನೀಡಲಿದ್ದು, ತಾಲೂಕಿನಲ್ಲಿ ಮೋಜು ಮಸ್ತಿಗೆ ಬ್ರೇಕ್ ಬೀಳಲಿದೆ ಎಂಬ ಮಾಹಿತಿ ಕೇಳಿಬಂದಿದೆ.
ಇದನ್ನೂ ಓದಿ : ಹೊಸ ವರ್ಷಾಚರಣೆಗೆ ಹೀಗಿರಲಿದೆ ಬೆಂಗಳೂರು..! ಪೊಲೀಸರಿಂದ ಭದ್ರತಾ ಕ್ರಮ ಆರಂಭ
ಹೊಸ ವರ್ಷಾಚರಣೆಗೆ ಬೆಂಗಳೂರಿನಲ್ಲಿ ಭದ್ರತಾ ಕ್ರಮ: ಹೊಸ ವರ್ಷಾಚರಣೆ ಭದ್ರತಾ ಕ್ರಮಗಳ ಕುರಿತು ಮಾಧ್ಯಮಗಳ ಜೊತೆ ಮಾತನಾಡಿದ ನಗರ ಪೊಲೀಸ್ ಆಯುಕ್ತ ಬಿ. ದಯಾನಂದ್, ಈ ಸಮಯದಲ್ಲಿ ಅನಧಿಕೃತವಾಗಿ ಮದ್ಯ ಶೇಖರಣೆ ಹಾಗೂ ಮಾರಾಟ ಮಾಡಲು ಅವಕಾಶ ಇರುವುದಿಲ್ಲ. ಡ್ರಿಂಕ್ ಅಂಡ್ ಡ್ರೈವ್ ವಿರುದ್ಧ ಈಗಾಗಲೇ ಕಾರ್ಯಾಚರಣೆ ಆರಂಭಿಸಲಾಗಿದೆ. ರಾತ್ರಿ ಒಂದು ಗಂಟೆಯ ವರೆಗೆ ಮಾತ್ರ ಸಂಭ್ರಮಾಚರಣೆಗಳಿಗೆ ಅವಕಾಶ ಇರಲಿದ್ದು, ನಂತರ ಹೋಟೆಲ್, ಬಾರ್, ಪಬ್ ಎಲ್ಲವೂ ಬಂದ್ ಮಾಡಬೇಕು ಎಂದು ತಿಳಿಸಿದ್ದಾರೆ.
ಜನಸಂದಣಿಯಿರುವ ಸ್ಥಳಗಳಲ್ಲಿ ಬಂದೋಬಸ್ತ್ ಪಿಕೆಟಿಂಗ್ ಪಾಯಿಂಟ್ಗಳನ್ನು ಮಾಡಲಾಗಿದೆ. ಸ್ಟಾರ್ ಹೋಟೆಲ್, ಪಬ್, ಕ್ಲಬ್, ರೆಸ್ಟೋರೆಂಟ್ಗಳಿರುವ ಕಡೆಗಳಲ್ಲಿ ಬಂದೋಬಸ್ತ್ ಪಾಯಿಂಟ್, ಮಹಿಳೆಯರ ಸುರಕ್ಷತೆಗಾಗಿ ಸೇಫ್ಟಿ ಐಲ್ಯಾಂಡ್ಸ್ಗಳ ನಿರ್ಮಾಣ ಮಾಡಲಾಗಿದೆ. ಮಕ್ಕಳು ಕಾಣೆಯಾದರೆ ಮಾಹಿತಿ ನೀಡಲು ಪೊಲೀಸ್ ಕಿಯೋಸ್ಕ್ಗಳು, ಸೂಕ್ತ ಕಣ್ಗಾವಲು ಪ್ರದೇಶದಲ್ಲಿ ವಾಚ್ ಟವರ್ಗಳ ನಿರ್ಮಾಣ ಮಾಡಲಾಗಿದೆ. ನಗರದ ಎಲ್ಲ ಪೊಲೀಸ್ ಸಿಬ್ಬಂದಿ ಹೊಸ ವರ್ಷಾಚರಣೆಯ ದಿನ ಕರ್ತವ್ಯದಲ್ಲಿರಲಿದ್ದು, ಇಬ್ಬರು ಹೆಚ್ಚುವರಿ ಆಯುಕ್ತರಿಗೆ ಭದ್ರತೆಯ ನೇತೃತ್ವ ವಹಿಸಲಾಗಿದೆ. ಓರ್ವ ಜಂಟಿ ಪೊಲೀಸ್ ಆಯುಕ್ತರು, 15 ಜನ ಡಿಸಿಪಿಗಳು, 45 ಜನ ಎಸಿಪಿ, 160 ಇನ್ಸ್‌ಪೆಕ್ಟರ್ಸ್, 600 ಪಿಎಸ್ಐಗಳು, 600 ಎಎಸ್ಐಗಳು, 1800 ಹೆಡ್ ಕಾನ್ಸ್ಟೇಬಲ್ಗಳು, 5,200 ಪೊಲೀಸ್ ಕಾನ್ಸ್ಟೇಬಲ್ಗಳನ್ನು ಬಂದೋಬಸ್ತ್ ಕರ್ತವ್ಯಕ್ಕೆ ನಿಯೋಜನೆ ಮಾಡಲಾಗುವುದು ಎಂದು ಆಯುಕ್ತರು ಮಾಹಿತಿ ನೀಡಿದ್ದಾರೆ.