ಚಿಕ್ಕಬಳ್ಳಾಪುರ : ಜಿಲ್ಲೆಯ 31ನೇ ವಾರ್ಡ್ನಲ್ಲಿ ನಡೆದ ನಗರಸಭೆ ಚುನಾವಣೆಯಲ್ಲಿ ಹದಿನಾರು ಕಾಂಗ್ರೆಸ್, ಒಂಬತ್ತು ಬಿಜೆಪಿ, ಇಬ್ಬರು ಜೆಡಿಎಸ್‌ನಿಂದ ಗೆದ್ದಿದ್ದರು. ಬಹುಮತ ಹೊಂದಿದ್ದ ಕಾಂಗ್ರೆಸ್ ಪಕ್ಷ ಅಧಿಕಾರ ಹಿಡಿಯುವ ತವಕದಲ್ಲಿತ್ತು.
ಆದರೆ, ಸಚಿವರ ಪ್ರಭಾವದಿಂದ 7 ಜನ ಕೈ ಸದಸ್ಯರು ಕೈಗೆ ಕೈಕೊಟ್ಟು ಬಿಜೆಪಿಯೊಂದಿಗೆ ಮಿಂಗಲ್ ಆಗಿದ್ರು. ಕೈಕೈಕೊಟ್ಟ ಸದಸ್ಯರನ್ನ ಪಕ್ಷದಿಂದ ಉಚ್ಛಾಟನೆ ಮಾಡಿ, ಸದಸ್ಯತ್ವ ರದ್ದು ಮಾಡುವಂತೆ ಕೋರ್ಟ್ ಮೆಟ್ಟಿಲೇರಿದ್ದರು. ವಿಪ್ ಉಲ್ಲಂಘನೆ ಮಾಡಿರುವವರ ಪರ ತೀರ್ಪು ಬಂದಿರೋದು ಈಗ ಕಾಂಗ್ರೆಸ್ಸಿಗರ ಆಕ್ರೋಶಕ್ಕೆ ಕಾರಣವಾಗಿದೆ.
ಚಿಕ್ಕಬಳ್ಳಾಪುರದಲ್ಲಿ ನಡೆದಿದ್ದ ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆಯಲ್ಲಿ ಕಾಂಗ್ರೆಸ್ಗೆ ಸ್ಪಷ್ಟ ಬಹುಮತ ಇದ್ದು, ಇನ್ನೇನು ಅಧ್ಯಕ್ಷ ಸ್ಥಾನ ತಮ್ಮದೇ ಅಂದುಕೊಂಡಿದ್ದರು. ಆದ್ರೆ, ತಮ್ಮ ಪಕ್ಷದ ಸದಸ್ಯರೇ ವಿಪ್ ಜಾರಿಯಲ್ಲಿದ್ದರೂ ಸಹ ಬಿಜೆಪಿಗೆ ಅಡ್ಡ ಮತದಾನ ಮಾಡಿ ಅಧ್ಯಕ್ಷ ಸ್ಥಾನ ಕೈತಪ್ಪಿ ಹೋಗಿತ್ತು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಕೇಶವರೆಡ್ಡಿ ವಿಪ್ ಉಲ್ಲಂಘನೆ ಮಾಡಿದ 7 ಜನರ ಸದಸ್ಯತ್ವ ರದ್ದು ಮಾಡಬೇಕೆಂದು ಜಿಲ್ಲಾಧಿಕಾರಿಗೆ ಮತ್ತು ನ್ಯಾಯಾಲಯದಲ್ಲಿ ದೂರು ದಾಖಲಿಸಿದ್ದರು.
ನಗರಸಭೆ ಸದಸ್ಯರ ಅನರ್ಹತೆ ಸಂಬಂಧಿಸಿದಂತೆ ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿಗಳ ನ್ಯಾಯಾಲಯದಲ್ಲಿ ಕಳೆದ 15 ತಿಂಗಳಿಂದ ವಿಚಾರಣೆ ನಡೆಯುತ್ತಿದ್ದು, ಪ್ರತಿಸಾರಿ ವಿಚಾರಣೆ ಮುಂದೂಡುತ್ತಿದ್ದ ಹಿನ್ನೆಲೆ ರಾಜ್ಯ ಉಚ್ಚನ್ಯಾಯಾಲಯದ ಮೊರೆ ಹೋಗಿದ್ದರು.
ನಾಲ್ಕು ವಾರದಲ್ಲಿ ಇತ್ಯರ್ಥಗೊಳಿಸುವಂತೆ ಜಿಲ್ಲಾಧಿಕಾರಿಗಳಿಗೆ ಹೈಕೋರ್ಟ್ ಸೂಚಿಸಿದ್ದರಿಂದ ಈಗ ತೀರ್ಪು ನೀಡಿದೆ. ವಿಪ್ ಉಲ್ಲಂಘನೆ ಮಾಡಿರುವ ಪರ ತೀರ್ಪು ಬಂದಿದ್ದು, ಅಡ್ಡ ಮತದಾನ ಮಾಡಿದ ಏಳು ಸದಸ್ಯರನ್ನು ವಜಾಗೊಳಿಸಲು ಕಾಂಗ್ರೆಸ್ ಪೂರಕ ದಾಖಲೆಗಳನ್ನು ಒದಗಿಸಿದರೂ ವಜಾಗೊಳಿಸಿಲ್ಲ. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಿಗೆ ವಿಪ್ ಕೊಡುವ ಅರ್ಹತೆ ಇಲ್ಲ.
ಅವರು ಸಲ್ಲಿಸಿರುವ ಅರ್ಜಿಯೇ ಸರಿ ಇಲ್ಲ ಎಂದು ಜಿಲ್ಲಾಧಿಕಾರಿಗಳು ಕಾಂಗ್ರೆಸ್ ಕೊಟ್ಟಿರುವ ಅರ್ಜಿಯನ್ನು ವಜಾ ಮಾಡಿದ್ದಾರೆ. ರಾಜಕೀಯ ಒತ್ತಡದಿಂದ ಹೀಗೆ ತೀರ್ಪು ನೀಡಿದ್ದಾರೆ. ಇದರಲ್ಲಿ ಪ್ರಭಾವಿಗಳ ಕೈವಾಡ ಇದೆ ಎಂದು ಆರೋಗ್ಯ ಸಚಿವ ಡಾ. ಸುಧಾಕರ್ ಬಗ್ಗೆ ಪರೋಕ್ಷವಾಗಿ ಮಾತನಾಡಿದ್ದಾರೆ.
ರಾಜ್ಯದ ಹಲವು ನಗರಸಭೆಗಳಲ್ಲಿ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ವಿಪ್ ಉಲ್ಲಂಘಿಸಿದವರ ಬಗ್ಗೆ ದೂರು ನೀಡಿದ್ದ ಅನ್ವಯ ಅಲ್ಲಿನ ಜಿಲ್ಲಾಧಿಕಾರಿಗಳು ಅಂಥಹವರನ್ನು ಅನರ್ಹಗೊಳಿಸಿ ಆದೇಶ ಹೊರಡಿಸಿದ್ದಾರೆ.
ಆದರೆ, ಇಲ್ಲಿ ಚುನಾವಣೆಯಲ್ಲಿ ವಿಪ್ ಉಲ್ಲಂಘನೆ ಮಾಡಿದವರನ್ನ ರಕ್ಷಣೆ ಮಾಡೋ ಸಲುವಾಗಿ ಇಷ್ಟು ಕಾಲ ಮುಂದೂಡಿಕೊಂಡು ಬಂದಿದ್ದು, ಉಚ್ಚ ನ್ಯಾಯಾಲಯವು 2021ರ ನ. 27ರಂದು ಡಬ್ಲೂಪಿ 21281/2021 LBರಂತೆ ಜಿಲ್ಲಾಧಿಕಾರಿಗಳಿಗೆ ನಾಲ್ಕು ವಾರದಲ್ಲಿ ಈ ಪ್ರಕರಣವನ್ನು ಇತ್ಯರ್ಥಪಡಿಸುವಂತೆ ನಿರ್ದೇಶನ ನೀಡಿದ ಹಿನ್ನೆಲೆ ವಿಚಾರಣೆಗೆ ಕರೆದಿದ್ದಾರೆ.
ನಮ್ಮ ಅರ್ಜಿಯನ್ನು ತಿದ್ದುಪಡಿ ಮಾಡಲು ಅವಕಾಶ ಸೇರಿದಂತೆ ಚುನಾವಣಾ ಅಧಿಕಾರಿಯ ಸಾಕ್ಷಿ ಬೇಕಿರುವ ಕಾರಣ ಅವರನ್ನು ಪಾರ್ಟಿಯಾಗಿ ಕರೀಬೇಕು ಅಂತಾ ಕೇಳಿದ್ದು, ಇವನ್ನೆಲ್ಲ ಪರಿಗಣಿಸದೆ ಕೋರ್ಟ್ ಡೈರೆಕ್ಷನ್ ಹೆಸರಲ್ಲಿ ವಿಪ್ ಉಲ್ಲಂಘನೆ ಮಾಡಿದವರ ಪರ ನಿಂತಿದ್ದಾರೆ ಎಂದು ಆರೋಪಿಸಿ ಹೈಕೋರ್ಟ್ ಮೊರೆ ಹೋಗಿ ನ್ಯಾಯ ಪಡೆಯುವ ಭರವಸೆಯಲ್ಲಿದ್ದಾರೆ ಎಂದರು.
ಚುನಾವಣೆಯಲ್ಲಿ ಅಡ್ಡಮತದಾನ ಮಾಡಿದ ಏಳು ಜನ ನಗರಸಭೆ ಸದಸ್ಯರನ್ನು ವಜಾ ಮಾಡದೇ ಸಚಿವರ ಪ್ರಭಾವಕ್ಕೆ ಮಣಿದು ಜಿಲ್ಲಾಧಿಕಾರಿಗಳು ಮತ್ತೆ ವಿಚಾರಣೆ ಮುಂದೂಡಿ ಟೈಮ್ ಪಾಸ್ ಮಾಡ್ತಾ ಇದ್ರು. ಆದರೆ, ಇಷ್ಟು ದಿನ ಕಳೆದ ಮೇಲೆ ಕಾಂಗ್ರೆಸ್ ನೀಡಿರುವ ತಕರಾರು ಅರ್ಜಿಯನ್ನೇ ಜಿಲ್ಲಾಧಿಕಾರಿಗಳು ವಜಾ ಮಾಡಿರುವುದು ಕೈ ನಾಯಕರನ್ನು ಕೆರಳಿಸಿದೆ.
ಓದಿ: ವೋಟ್ ಬ್ಯಾಂಕ್ಗಾಗಿ ಹಿಜಾಬ್ ವಿವಾದ ಹುಟ್ಟು ಹಾಕಿದ ಕಾಂಗ್ರೆಸ್ : ಸಿಟಿ ರವಿ ಗಂಭೀರ ಆರೋಪ