ಚಿಕ್ಕಬಳ್ಳಾಪುರ: ಖಾಸಗಿ ಬಸ್ ಪಲ್ಟಿಯಾದ ಪರಿಣಾಮ ನಾಲ್ವರು ಪ್ರಯಾಣಿಕರು ಸಾವನ್ನಪ್ಪಿದ್ದು, ಹಲವರು ಗಂಭೀರ ಗಾಯಗೊಂಡಿರುವ ಘಟನೆ ಜಿಲ್ಲೆಯ ಬಾಗೇಪಲ್ಲಿ ತಾಲೂಕಿನ ಬೈರೇಗೊಲ್ಲಹಳ್ಳಿಯಲ್ಲಿ ಇಂದು ನಡೆಯಿತು.
ಓವರ್‌ಟೇಕ್ ಮಾಡುವ ಭರದಲ್ಲಿ ಚಾಲಕನ ನಿಯಂತ್ರಣ ತಪ್ಪಿದ ಬಸ್ ಮರಕ್ಕೆ ಡಿಕ್ಕಿ ಹೊಡೆದಿದೆ. ಸ್ಥಳದಲ್ಲೇ ಮೂವರು ಸಾವನ್ನಪ್ಪಿದರೆ, ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಒಬ್ಬರು ಅಸುನೀಗಿದ್ದಾರೆ. ಅಪಘಾತದಲ್ಲಿ 8 ಮಂದಿ ಗಂಭೀರವಾಗಿ ಗಾಯಗೊಂಡಿದ್ದು, ಸಾರ್ವಜನಿಕ ಆಸ್ಪತ್ರೆ ಹಾಗೂ ಜಿಲ್ಲಾಸ್ಪತ್ರೆಯಲ್ಲಿ ದಾಖಲಿಸಲಾಗಿದೆ.
ಬಸ್ ಚೇಳೂರು, ಚಾಕುವೇಲು ಮಾರ್ಗವಾಗಿ ಬಾಗೇಪಲ್ಲಿಗೆ 40 ಪ್ರಯಾಣಿಕರನ್ನು ತುಂಬಿಕೊಂಡು ಸಂಚರಿಸುತ್ತಿತ್ತು. ಮತ್ತೊಂದು ಬಸ್ಸನ್ನು ಹಿಂದಿಕ್ಕಲು ಹೋಗಿ ಅಪಘಾತ ಸಂಭವಿಸಿದೆ. ಪಲ್ಟಿಯಾದ ಬಸ್ಅನ್ನು ಜೆಸಿಬಿ ಮೂಲಕ ತೆರವುಗೊಳಿಸಲಾಗಿದೆ. ಘಟನಾ ಸ್ಥಳಕ್ಕೆ ಪಾತಪಾಳ್ಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಚಿಕ್ಕಮಗಳೂರಿನಲ್ಲಿ ಬೈಕ್ಗೆ ಕಾರು ಡಿಕ್ಕಿ-ಇಬ್ಬರು ಸಾವು: ವೇಗವಾಗಿ ಬಂದ ಕಾರು ಬೈಕಿಗೆ ಡಿಕ್ಕಿ ಹೊಡೆದು ಇಬ್ಬರು ಯುವಕರು ಮೃತಪಟ್ಟಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ನಡೆದಿದೆ. ಕಡೂರು ತಾಲೂಕಿನ ಚಿಕ್ಕಪಟ್ಟಣಗೆರೆ ಗೇಟಿನ ಬಳಿ ಅಪಘಾತ ಸಂಭವಿಸಿದೆ. ಚಿಕ್ಕಗೌಜದ ಮನೋಜ್ (25) ಹಾಗೂ ಪಾಂಡವಪುರದ ನಯನ್ (27) ಎಂಬವರು ಮೃತಪಟ್ಟಿದ್ದಾರೆ.
ಚಿಕ್ಕಮಗಳೂರಿನಲ್ಲಿ ಕೆಲಸ ಮುಗಿಸಿಕೊಂಡು ಮನೋಜ್ ತಮ್ಮ ಬೈಕಿನಲ್ಲಿ ಪಾಂಡವಪುರ ನಿವಾಸಿ ನಯನ್ ಅವರೊಂದಿಗೆ ಕಡೂರಿಗೆ ವಾಪಸ್ ಆಗುತ್ತಿದ್ದರು. ಕಡೂರು ಕಡೆಯಿಂದ ಅತಿ ವೇಗವಾಗಿ ಕಾರು ಚಾಲನೆ ಮಾಡಿಕೊಂಡು ಬಂದ ಚಾಲಕ ಬೈಕಿಗೆ ಡಿಕ್ಕಿ ಹೊಡೆದಿದ್ದಾನೆ. ಗಂಭೀರವಾಗಿ ಗಾಯಗೊಂಡ ನಯನ್ ಸ್ಥಳದಲ್ಲೇ ಮೃತಪಟ್ಟರೆ, ಮನೋಜ್ ಶಿವಮೊಗ್ಗದ ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಕೊನೆಯುಸಿರೆಳೆದಿದ್ದಾರೆ.
ಕಾರಿನಲ್ಲಿದ್ದ ಪ್ರೀತಮ್ ಮುಖಕ್ಕೆ ಗಂಭೀರ ಗಾಯವಾಗಿದೆ. ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನಾ ಸ್ಥಳಕ್ಕೆ ಸಬ್ಇನ್ಸ್‌ಪೆಕ್ಟರ್ ಧನಂಜಯ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕಡೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಟಾಟಾ ಏಸ್ - ಲಾರಿ ನಡುವೆ ಭೀಕರ ಅಪಘಾತ: ನಾಲ್ವರು ಸಾವು, ಒಬ್ಬನಿಗೆ ಗಾಯ