ಬಾಗೇಪಲ್ಲಿ: ರಾಜ್ಯದಲ್ಲಿ ಕೊರೊನಾ ಸೋಂಕಿನ 2ನೇ ಅಲೆ ದಿನದಿಂದ ದಿನಕ್ಕೆ ತೀವ್ರವಾಗುತ್ತಲೇ ಇದೆ. ಸರಿಯಾಗಿ ಆಸ್ಪತ್ರೆಗಳಲ್ಲಿ ಹಾಸಿಗೆ ಸಿಗದೆ, ಆಮ್ಲಜನಕದ ವ್ಯವಸ್ಥೆಯಿಲ್ಲದೇ ಸಾವು-ನೋವುಗಳು ಸಂಭವಿಸುತ್ತಿರುವ ಸಂಕಷ್ಟದ ಸಮಯದಲ್ಲಿ ಸಮಾಜಸೇವಕರು ಎಲ್ಲಿ ಹೋದರು? ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಮೂಡಿದೆ.
ಕೊರೊನಾ ತೀವ್ರತೆ ಇಲ್ಲದಿದ್ದರೆ ಇಷ್ಟೊತ್ತಿಗಾಗಲೇ ತಾಲೂಕು ಪಂಚಾಯತ್ ಮತ್ತು ಜಿಲ್ಲಾ ಪಂಚಾಯತ್ ಚುನಾವಣಾ ಅಬ್ಬರದಲ್ಲಿ ಸಮಾಜ ಸೇವಕರು, ಜನೋದ್ಧಾರಕರೆಂಬ ಸ್ವಯಂ ಘೋಷಿತ ರಾಜಕಾರಣಿಗಳು ಬೊಬ್ಬೆ ಹೊಡೆಯುತ್ತಿದ್ದರು. ನಾವು ಅಷ್ಟು ಕ್ಷೇತ್ರಗಳಲ್ಲಿ ಗೆಲ್ಲಬೇಕು. ಇಷ್ಟು ಕ್ಷೇತ್ರಗಳಲ್ಲಿ ನಮ್ಮ ಹಿಡಿತ ಸಾಧಿಸಬೇಕು. ಆ ಅಭ್ಯರ್ಥಿ, ಈ ಅಭ್ಯರ್ಥಿ ಎಂದೆಲ್ಲ ಸಭೆಗಳ ಮೇಲೆ ಸಭೆಗಳು ನಡೆಸಿ ತಮ್ಮ ಪಟಾಲಂ ಗಳಿಗೆ ಕುಡಿಸಿ, ತಿನ್ನಿಸಿ ಬಲ ಪದರ್ಶನಗಳ ವೇದಿಕೆಯಾಗಿ ಇಡೀ ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರ ಮಾರ್ಪಡುತ್ತಿತ್ತು.
ಇದಕ್ಕೆ ಪೂರ್ವ ತಯಾರಿಯಾಗಿ ಲಾಕ್ಡೌನ್ ಘೋಷಣೆಗೂ ಮೊದಲೇ ಕ್ರಿಕೆಟ್ ಪಂದ್ಯಾವಳಿ, ಕಬಡ್ಡಿ ಪಂದ್ಯಾವಳಿಗಳನ್ನು ನಡೆಸಿ ಸೈ ಎನಿಸಿಕೊಂಡಿದ್ದಾರೆ. ಗ್ರಾಮ ಪಂಚಾಯತ್ ಚುನಾವಣೆಗಳಲ್ಲಿ ತಮ್ಮ ಬೆಂಬಲಿತ ಅಭ್ಯರ್ಥಿಗಳು ಗೆಲುವು ಸಾಧಿಸಿರುವ ಸಂಭ್ರಮದ ರೂಪದಲ್ಲಿ ತಾಲೂಕು ಮತ್ತು ಜಿಲ್ಲಾ ಪಂಚಾಯತ್ ಚುನಾವಣೆ ಸಿದ್ಧತೆಯ ಪೂರ್ವಭಾವಿ ಸಭೆಗಳನ್ನು ಮುಗಿಸಿಕೊಂಡಿದ್ದರು.
ಅವರವರ ಮಟ್ಟಿಗೆ ಎಲ್ಲರೂ ಸ್ವಾರ್ಥ ಸಾಧಕರೇ ಎಂಬುದು ಸಾಬೀತಾಗಿದೆ. ಹಾಗಾಗಿಯೇ ಸೋಂಕು ಹರಡುವುದು ಹೆಚ್ಚಾಗುತ್ತಿದ್ದಂತೆ ಯಾರು? ಯಾರಿಗೂ ಇಲ್ಲ ಎಂಬ ಸ್ಪಷ್ಟ ಸಂದೇಶವನ್ನು ನೀಡಿದ್ದಾರೆ.
ಸಮಾಜಸೇವಕರೆಂಬ ರಾಜಕಾರಣಿಗಳು ಏನ್ ಮಾಡಬಹುದಿತ್ತು?
ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರದಲ್ಲಿ ರಾಜಕೀಯಕ್ಕಿಳಿಯಲೆಂದು ಬಂದ ಸಮಾಜಸೇವೆಯ ಮುಖವಾಡ ಹೊತ್ತವರು ಕನಿಷ್ಠ ಒಂದೊಂದು ಜಿಲ್ಲಾ ಪಂಚಾಯತ್ ಕ್ಷೇತ್ರವನ್ನು ತಮ್ಮ ವ್ಯಾಪ್ತಿಗೆ ಅಥವಾ ದತ್ತು ಪಡೆದು ಅಲ್ಲಿನ ಬಡವರು, ನಿರ್ಗತಿಕರಿಗೆ ಸರ್ಕಾರದಿಂದ ಏನೆಲ್ಲ ಸೌಲಭ್ಯಗಳನ್ನು ಕೊಡಿಸಬಹುದು ಮತ್ತು ತಾವೇನು ಕೊಡಬಹುದು ಎಂಬುದನ್ನು ಮಾಡಿ ತೋರಿಸಬಹುದಿತ್ತು. ಜೊತೆಗೆ ಆಮ್ಲಜನಕ, ಆಸ್ಪತ್ರೆಗಳಲ್ಲಿ ಹಾಸಿಗೆಗಳ ವ್ಯವಸ್ಥೆ ಮಾಡಿ, ಕೊರೊನಾ ಸೋಂಕಿತರ ಕುಟುಂಬಗಳಿಗೆ ಧೈರ್ಯ ತುಂಬ ಬೇಕಿತ್ತು. ಇದರಿಂದ ಸಮಾಜಸೇವೆಯೂ ಆಗುತ್ತಿತ್ತು. ಸಂಕಷ್ಟದಲ್ಲಿನ ಜನರ ಪರ ನಿಲ್ಲುವ ಹಾಗೆಯೂ ಆಗುತ್ತಿತ್ತು ಎಂಬ ಮಾತುಗಳು ಕೇಳಿ ಬಂದಿವೆ.
ಹಾಲಿ ಶಾಸಕ ಎಸ್. ಎನ್ ಸುಬ್ಬಾರೆಡ್ಡಿ, ಸಿನಿಮಾ ನಿರ್ಮಾಪಕರಾದ ಸಿ.ಆರ್ ಮನೋಹರ್, ಚಿತ್ರ ನಟ ಸಾಯಿಕುಮಾರ್, ಗುಂಜೂರು ಶ್ರೀನಿವಾಸರೆಡ್ಡಿ, ಡಿ.ಜೆ ನಾಗರಾಜರೆಡ್ಡಿ, ಅರಿಕೆರೆ ಕೃಷ್ಣಾರೆಡ್ಡಿ, ಮಿಥುನ್ ರೆಡ್ಡಿ, ಇತ್ತೀಚೆಗೆ ವೀರಾರೆಡ್ಡಿ ಹೀಗೆ ಹಲವು ಮಂದಿ ರಾಜಕಾರಣ ಮಾಡಲು ಸಮಾಜಸೇವಕರಾಗಿ ಈ ಕ್ಷೇತ್ರಕ್ಕೆ ಬಂದವರು. ಆದರೆ, ಚುನಾವಣೆ ಮುಗಿಯುತ್ತಿದ್ದಂತೆ ಕೆಲವರ ಸದ್ದು ಅಡಗುತ್ತದೆ. ಮತ್ತೆ ಕೆಲವರ ಸದ್ದು ಆಗಾಗ್ಗೆ ಕೇಳಿಸುತ್ತದೆ.
ಆದರೆ, ನಿಜವಾಗಲೂ ಈ ಕ್ಷೇತ್ರದ ಎಲ್ಲ ಸಮುದಾಯದ ಸಾಮಾಜಿಕ ಪರಿಸ್ಥಿತಿ ಬದಲಾಗಿದೆಯೇ?. ಹೋಗಲಿ ಇಂತಹ ಕೋವಿಡ್ ಕಷ್ಟಕಾಲದಲ್ಲಿ ಪಕ್ಷಾತೀತವಾಗಿ ಸರ್ವ ಜನಾಂಗದ ಒಳಿತಿಗಾಗಿ ಶ್ರಮಿಸುವವರು ಇದ್ದಾರೆಯೇ?. ಕೊರೊನಾ ಸಂಕಷ್ಟದಲ್ಲಿ ನೆನಪಾಗದ ಸಮಾಜಸೇವೆ ಚುನಾವಣಾ ಸಂದರ್ಭಕ್ಕೆ ನೆನಪಾಗುವುದು ಸ್ವಾರ್ಥ ರಾಜಕಾರಣದ ಮತ್ತೊಂದು ರೂಪವಷ್ಟೇ ಎಂಬುದು ಜನಸಾಮಾನ್ಯರ ಮಾತಾಗಿದೆ.
ಓದಿ: 24 ಗಂಟೆಯಲ್ಲಿ ಕೋವಿಡ್ ಟೆಸ್ಟ್ ಲಭ್ಯವಾಗಬೇಕು.. ಸರ್ಕಾರಕ್ಕೆ ಹೈಕೋರ್ಟ್ ಆದೇಶ