ಚಿಕ್ಕಬಳ್ಳಾಪುರ: ಪಿಎಸ್‍ಐ ಹುದ್ದೆ ನೇಮಕಾತಿಯಲ್ಲಿ ಅಕ್ರಮ ನಡೆದಿರುವ ಪ್ರಕರಣದ ತೀವ್ರ ತನಿಖೆ ನಡೆಯುತ್ತಿರುವ ಬೆನ್ನಲ್ಲೇ ಪಿಎಸ್‍ಐ ಹುದ್ದೆ ಕೊಡಿಸುವುದಾಗಿ 21 ಲಕ್ಷ ರೂಪಾಯಿ ವಸೂಲಿ ಮಾಡಿ ವಂಚನೆ ಮಾಡಿರುವ ಆರೋಪಿಯನ್ನು ಬಾಗೇಪಲ್ಲಿ ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ಪೊಲೀಸರು ಶೋಕಿಲಾಲ ನವೀನ್ ಧಳಬಂಜನ್‍ನನ್ನು ಬಂಧಿಸಿದ್ದಾರೆ. ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ಪಟ್ಟಣದ ನಿವೃತ್ತ ಶಿಕ್ಷಕ ಸತ್ಯನಾರಾಯಣ ಅವರ ಮಗ ಕಿರಣ್ 2019ರಲ್ಲಿ 300 ಮಂದಿ ಪಿಎಸ್‍ಐಗಳ ನೇಮಕಾತಿ ವೇಳೆ ದೈಹಿಕ ಪರೀಕ್ಷೆಯಲ್ಲಿ ಅನುತ್ತೀರ್ಣನಾಗಿದ್ದ. ಆದರೆ, ಈ ವೇಳೆ ಸತ್ಯನಾರಾಯಣ ಸ್ನೇಹಿತ ಜಯರಾಮರೆಡ್ಡಿ ಮೂಲಕ ಪರಿಚಯವಾದ ಹುಬ್ಬಳ್ಳಿ ಮೂಲದ ನವೀನ್ ಧಳಬಂಜನ್ ನಿಮ್ಮ ಮಗನಿಗೆ ನಾನು ಪಿಎಸ್‍ಐ ಹುದ್ದೆ ಕೊಡಿಸುತ್ತೇನೆ ಅಂತ ಹೇಳಿ ಹಂತ, ಹಂತವಾಗಿ ಸತ್ಯನಾರಾಯಣರೆಡ್ಡಿ ಬಳಿ 21 ಲಕ್ಷ ರೂಪಾಯಿ ಪಡೆದಿದ್ದಾನೆ.
ಇದನ್ನೂ ಓದಿ: ಗಂಡನ ಮನೆಯಲ್ಲಿ ಶೌಚಾಲಯ ಇಲ್ಲವೆಂದು ಆತ್ಮಹತ್ಯೆಗೆ ಶರಣಾದ ನವವಿವಾಹಿತೆ
21 ಲಕ್ಷ ರೂಪಾಯಿ ಪಡೆದ ಆರೋಪಿ ನವೀನ್ ಧಳವಂಜನ್ PSI ಕೆಲಸ ಕೊಡಿಸದ ಹಿನ್ನೆಲೆ ಸತ್ಯನಾರಾಯಣರೆಡ್ಡಿ ದುಡ್ಡು ವಾಪಸ್ ನೀಡುವಂತೆ ಒತ್ತಾಯ ಮಾಡಿದ್ದಾರೆ . ಈಗ ಕೊಡುತ್ತೇನೆ ಆಗ ಕೊಡುತ್ತೇನೆ ಅಂತ ಸುಳ್ಳು ಕಥೆ ಹೇಳಿದ್ದಾನೆ. ಈ ವಿಚಾರವಾಗಿ ನವೀನ್ ವಿರುದ್ಧ ಬಾಗೇಪಲ್ಲಿ ಪೊಲೀಸ್ ಠಾಣೆಗೆ ದೂರು ದಾಖಲು ಮಾಡಿದ್ದರು. ದೂರಿನನ್ವಯ ಇದೀಗ ಪೊಲೀಸರು ನವೀನ್ ಧಳಬಂಜನ್‍ನನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ. ಈ ವೇಳೆ ಆರೋಪಿ ಪಡೆದ ಹಣದಲ್ಲಿ ಶೋಕಿ ಮಾಡಿ ಖರ್ಚು ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ.