ಚಿಕ್ಕಬಳ್ಳಾಪುರ: ಕೊರೊನಾ ಸಂಕಷ್ಟದಲ್ಲಿ ನೇಕಾರರ ಸಮಸ್ಯೆಗಳಿಗೆ ಸರ್ಕಾರ ಸರಿಯಾಗಿ ಸ್ಪಂದಿಸುತ್ತಿಲ್ಲ ಎಂದು ಕೈಮಗ್ಗ ಹಾಗೂ ಜವಳಿ ಇಲಾಖೆ ಸಚಿವರಿಗೆ ನೇಕಾರ ಮುಖಂಡರು ತರಾಟೆಗೆ ತಗೆದುಕೊಂಡ ಘಟನೆ ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಭವನದಲ್ಲಿ ನಡೆದಿದೆ.
ಕೈಮಗ್ಗ ಹಾಗೂ ಜವಳಿ ಸಚಿವ ಶ್ರೀಮಂತ ಪಾಟೀಲ್ರವರು ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಭವನದಲ್ಲಿ ಅಧಿಕಾರಿಗಳ ಸಭೆ ನಡೆಸಿ ಸಾರ್ವಜನಿಕರ ಅಹವಾಲು ಸ್ವೀಕರಿಸುವ ವೇಳೆ, ನೇಕಾರ ಸಮುದಾಯದ ಮುಖಂಡರು ಸಚಿವರಿಗೆ ತರಾಟೆಗೆ ತಗೆದುಕೊಂಡಿದ್ದಾರೆ. ಆತ್ಮಹತ್ಯೆ ಮಾಡಿಕೊಂಡ ನೇಕಾರ ಕುಟುಂಬಗಳಿಗೆ ಇದುವರೆಗೂ ಪರಿಹಾರ ಸಿಕ್ಕಿಲ್ಲ. ಸಾಕಷ್ಟು ಬಾರಿ ಮಂತ್ರಿಗಳು ಹಾಗೂ ಸರ್ಕಾರಕ್ಕೆ ಮನವಿ ಕೊಟ್ಟರೂ ಸಹ ಸ್ಪಂದನೆ ಸಿಗಲಿಲ್ಲವೆಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರಗತಿ ಪರಿಶೀಲನೆ ವೇಳೆ ಮಾತಾನಾಡಿದ ಸಚಿವ ಶ್ರೀಮಂತ ಪಾಟೀಲ್, ರಾಜ್ಯದಲ್ಲಿ 1.25 ಲಕ್ಷ ನೇಕಾರರು ಇದ್ದು, ಮುಂದಿನ ದಿನಗಳಲ್ಲಿ ಕೈಮಗ್ಗ ಜವಳಿ ಇಲಾಖೆಯಿಂದ ಗುರುತಿನ ಚೀಟಿ ನೀಡಲು ಕ್ರಮ ವಹಿಸಲಾಗಿದೆ ಎಂದು ತಿಳಿಸಿದರು. ಇದುವರೆಗೂ ನೇಕಾರ ಸಮ್ಮಾನ್ ಯೋಜನೆಯಲ್ಲಿ 42 ಸಾವಿರ ನೇಕಾರರಿಗೆ ತಲಾ 2000 ರೂ. ಸಾವಿರ ಸಹಾಯಧನ ನೀಡಲಾಗಿದೆ ಎಂದು ತಿಳಿಸಿದರು.