ಚಿಕ್ಕಬಳ್ಳಾಪುರ : ಸಚಿವ ಸುಧಾಕರ್ ಮಾತುಗಳನ್ನು ಕೇಳಿಕೊಂಡು ಡಿಸಿ, ಎಸ್ಪಿ, ಸಿಇಒ ಏಕಸ್ವಾಮ್ಯ ರೀತಿಯಲ್ಲಿ ವರ್ತಿಸುತ್ತಿದ್ದಾರೆ ಎಂದು ಮಾಜಿ ಸಚಿವ ಶಿವಶಂಕರರೆಡ್ಡಿ ಆರೋಪಿಸಿದರು. ತೈಲ ಬೆಲೆ ಏರಿಕೆ ಖಂಡಿಸಿ ನಗರದಲ್ಲಿ ಕಾಂಗ್ರೆಸ್ ಬೆಂಬಲಿಗರು ನಡೆಸಿದ ಪ್ರತಿಭಟನೆ ವೇಳೆ ಬಾಗೇಪಲ್ಲಿ ಶಾಸಕ ಸುಬ್ಬಾರೆಡ್ಡಿ ಹಾಗೂ ಗೌರಿಬಿದನೂರು ಶಾಸಕ ಶಿವಶಂಕರ್ ರೆಡ್ಡಿ ಸೇರಿದಂತೆ ಕಾಂಗ್ರೆಸ್ ಪಕ್ಷದ ಪದಾಧಿಕಾರಿಗಳು ಭಾಗಿಯಾಗಿ ಸರ್ಕಾರದ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.
ಬಳಿಕ ಮಾತನಾಡಿದ ಗೌರಿಬಿದನೂರು ಶಾಸಕ ಶಿವಶಂಕರ್ ರೆಡ್ಡಿ ಅವರು, ಜಿಲ್ಲೆಯ ಡಿಸಿ ಆರ್.ಲತಾ, ಎಸ್ಪಿ ಮಿಥುನ್ ಕುಮಾರ್, ಸಿಇಒ ಅವರನ್ನು ಕೋತಿಗಳಿಗೆ ಹೋಲಿಸಿದರು. ಮಹಾತ್ಮ ಗಾಂಧೀಜಿ ಜೊತೆಯಿದ್ದ ಕೋತಿಗಳ ಹಾಗೇ ಕಣ್ಣು,ಕಿವಿ, ಬಾಯಿ ಮುಚ್ಚಿಕೊಂಡಿರುವ ಕೋತಿಗಳಾಗಿದ್ದಾರೆ. ಸಚಿವ ಸುಧಾಕರ್ ವರ್ತನೆ ಅತಿಯಾಗಿದೆ, ಹತ್ತಿರದಲ್ಲೇ ಸಚಿವ ಸ್ಥಾನದಿಂದ ತೆಗೆಯುತ್ತಾರೆ ಎಂಬ ಮಾಹಿತಿ ನನಗೆ ತಿಳಿದಿದೆ ಎಂದು ಹೇಳಿದರು.
ಕಳೆದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗೆ ಹಣಕಾಸಿನ ಕೊರತೆ ಇತ್ತು. ಹಣಕಾಸಿನ ವ್ಯವಸ್ಥೆ ಆಗಿದ್ರೆ, ಸುಧಾಕರ್ ಮಣ್ಣು ಮುಕ್ಕುತ್ತಿದ್ದರು. ಈಗಾಗಲೇ ಸಚಿವ ಸುಧಾಕರ್ ವರ್ತನೆಯಿಂದ ಜನ ಕೂಡ ಬೇಸತ್ತಿದ್ದಾರೆ. ಭ್ರಷ್ಟಾಚಾರ, ಮಿತಿಮೀರಿದ ದಬ್ಬಾಳಿಕೆಯನ್ನು ಸಹಿಸದ ಜನ ಮುಂದೆ ಪಾಠ ಕಲಿಸುತ್ತಾರೆ ಎಂದು ಮಾಜಿ ಸಚಿವ ಶಿವಶಂಕರರೆಡ್ಡಿ ಹೇಳಿದರು.