ಚಿಕ್ಕಬಳ್ಳಾಪುರ: ಕ್ಷುಲ್ಲಕ ಕಾರಣಕ್ಕೆ ಎರಡು ಗುಂಪುಗಳ ನಡುವೆ ಜಗಳ ನಡೆದು, ದೊಣ್ಣೆ- ಕಲ್ಲುಗಳಿಂದ ಹೊಡೆದಾಡಿಕೊಂಡಿರುವ ಘಟನೆ ತಾಲೂಕಿನ ಬಂಡಹಳ್ಳಿ ಗ್ರಾಮದಲ್ಲಿ ನಡೆದಿದೆ.
ಬಂಡಹಳ್ಳಿ ಗ್ರಾಮದ ಮುನಿವೆಂಕಪ್ಪ, ಮನು ಹಾಗೂ ಸಹಚರರು ಕೃತ್ಯ ಎಸಗಿದ್ದಾರೆಂದು ಗಾಯಾಳುಗಳು ಆರೋಪಿಸಿದ್ದಾರೆ. ಹಲ್ಲೆಯಿಂದ ಒಂದೇ ಕುಟುಂಬದ ರಾಮಕೃಷ್ಣ, ಮಮತಾ ಸೇರಿದಂತೆ ಒಟ್ಟು 6 ಜನ ಗಾಯಗೊಂಡಿದ್ದಾರೆ. ಕ್ಷುಲ್ಲಕ ಕಾರಣಕ್ಕೆ ಆರಂಭವಾದ ಗಲಾಟೆ ಕಲ್ಲು, ಕೋಲುಗಳಿಂದ ಹೊಡೆದಾಡಿಕೊಳ್ಳುವವರೆಗೆ ಹೋಗಿದೆ. ದೊಣ್ಣೆಗಳಿಂದ ಹೊಡೆದಾಡುವ ವಿಡಿಯೋ ಮೊಬೈಲ್ನಲ್ಲಿ ಸೆರೆಯಾಗಿದೆ.
ಸದ್ಯ ಗಾಯಾಳುಗಳಿಗೆ ಗುಡಿಬಂಡೆ ಸಾರ್ವಜನಿಕ ಆಸ್ಪತ್ರೆ ಹಾಗೂ ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ನೀರು ಹಿಡಿಯುವ ವಿಚಾರಕ್ಕೆ ಗಲಾಟೆ ಶುರುವಾಗಿದೆ ಎಂದು ಗಾಯಾಳುಗಳು ಹೇಳಿದ್ದಾರೆ.
ಈ ಸಂಬಂಧ ಗುಡಿಬಂಡೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಹಲ್ಲೆ ನಡೆಸಿದ ಆರೋಪಿಗಳು ಪರಾರಿಯಾಗಿದ್ದಾರೆ. ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.