ಚಿಕ್ಕಬಳ್ಳಾಪುರ : ಆಧುನಿಕತೆ ಬೆಳೆದಂತೆ ಪ್ರತಿಯೊಂದು ಈಗ ಆನ್ಲೈನ್ ಆಗಿಬಿಟ್ಟಿದೆ. ಕೂತಲ್ಲೇ ನಿಂತಲ್ಲೇ ಆನ್ಲೈನ್ ಮೂಲಕ ಅನೇಕ ಕೆಲಸ ಪಡೆದುಕೊಳ್ಳಬಹುದು. ಇನ್ನು ಅತ್ಯವಸರವಾದ ರೇಷನ್‌ಕಾರ್ಡ್, ಆರೋಗ್ಯ ಕಾರ್ಡ್, ಕಾರ್ಮಿಕ ಕಾರ್ಡ್, ಆಧಾರ್ ಕಾರ್ಡ್ ಹೀಗೆ ಹತ್ತು ಹಲವು ದಾಖಲೆಗಳನ್ನು ಆನ್ಲೈನ್ ಮೂಲಕವೇ ಮಾಡಿಸಿಕೊಳ್ಳಬಹುದು.
ಇದನ್ನೇ ಬಂಡವಾಳ ಮಾಡಿಕೊಂಡ ಕಿಡಿಗೇಡಿಯೊಬ್ಬ ಕಾರ್ಮಿಕ ಕಾರ್ಡ್ ಮಾಡಿ ಕೊಡುವ ನೆಪದಲ್ಲಿ ಮನೆ ಬಳಿ ಹೋಗಿ ಆಧಾರ್ ಕಾರ್ಡ್, ಹೆಬ್ಬೆಟ್ಟಿನ ಗುರುತು ಪಡೆದು ಖಾತೆಯಲ್ಲಿದ್ದ ಹಣವನ್ನು ಲಪಟಾಯಿಸಿರುವ ಘಟನೆ ನಡೆದಿದೆ. ಚಿಕ್ಕಬಳ್ಳಾಪುರ ಜಿಲ್ಲೆ ಗುಡಿಬಂಡೆ ತಾಲೂಕಿನ ಮಂಡಿಕಲ್ಲು ಗ್ರಾಮದ ಗಾರೆ ಕೆಲಸ ಮಾಡುತ್ತಿರುವ ನಾಗರಾಜ್ ರೆಡ್ಡಿಗೆ, v3 ಸೈಬರ್ನಲ್ಲಿ ಕೆಲಸ ಮಾಡುತ್ತಿದ್ದ ರಂಜಿತ್ ಈ ಶ್ರಮ್ ಕಾರ್ಡ್ ಮಾಡಿಸಿಕೊಡುತ್ತೇನೆ.
ಈ ಕಾರ್ಡ್‌ನ ಮೂಲಕ ಸರ್ಕಾರದ ಎಲ್ಲಾ ಸೇವೆಗಳನ್ನು ಪಡೆಯಬಹುದು ಎಂದು ಹೇಳಿ ಮೊದಲು ರೇಷನ್ ಕಾರ್ಡ್ ನಂತರ ಆಧಾರ್ ಕಾರ್ಡ್ ತೆಗೆದುಕೊಂಡು ಅವರ ಬಳಿ ಹೆಬ್ಬೆಟ್ಟಿನ ಗುರುತನ್ನೂ ಪಡೆದು ಅವರಿಗೇ ತಿಳಿಯದಂತೆ ಹಣವನ್ನು ಅವರ ಖಾತೆಯಿಂದ ತೆಗೆದುಕೊಂಡಿದ್ದಾನೆ.
ನಂತರ ಮಗನಿಗೆ ಹಣದ ಅವಶ್ಯಕತೆ ಇದ್ದ ಕಾರಣ ಎಟಿಎಂನಲ್ಲಿ ಹಣ ಚೆಕ್ ಮಾಡಿದಾಗ ಹಣ ಡ್ರಾ ಮಾಡಿರುವುದು ಕಂಡು ಬಂದಿದೆ. ಅಲ್ಲದೆ ಈ ವಿಚಾರವಾಗಿ ಕಾರ್ಡ್ ಮಾಡಿಕೊಡಲು ಬಂದವನ ಬಳಿ ಹೋಗಿ ಕೇಳಿದಾಗ ಈಗ ಕೊಡುತ್ತೇನೆ, ನಾಳೆ ಕೊಡುತ್ತೇನೆ ಎಂದು ಕಥೆ ಹೇಳಿ ಬಡ ಕೂಲಿ ಕಾರ್ಮಿಕನಿಗೆ ಮೋಸ ಮಾಡಿದ್ದಾನೆ. ಈ ಕುರಿತು ಮೋಸಕ್ಕೆ ಒಳಗಾದ ವ್ಯಕ್ತಿ ಚಿಕ್ಕಬಳ್ಳಾಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದಾನೆ.
ಹೀಗೆ ಕೂಲಿ ನಾಲಿ ಮಾಡಿ ಜೀವನ ಸಾಗಿಸುತ್ತಿರುವ ಬಡ ಕಾರ್ಮಿಕರನ್ನೇ ಇಂಥವರಿಗೆ ಟಾರ್ಗೆಟ್ ಮಾಡಿಕೊಂಡಿರುತ್ತಾರೆ. ಹೀಗಾಗಿ, ಪೊಲೀಸ್ ಅಧಿಕಾರಿಗಳು ಬರೀ ಜನರಿಗೆ ಜಾಗೃತಿ ಮೂಡಿಸುವ ಬದಲು, ಇಂತಹ ಕೃತ್ಯಗಳನ್ನು ಮಾಡಿ ಸಿಕ್ಕಿ ಬಿದ್ದ ನಂತರ ಇವರಿಗೆ ಕಠಿಣ ಶಿಕ್ಷೆ ವಿಧಿಸಿದರೆ, ಇನ್ನಷ್ಟು ಜನರಿಗೆ ಮೋಸ ಮಾಡುವುದು ತಪ್ಪುತ್ತದೆ.
ಇಲ್ಲದಿದ್ದರೆ ನಾವು ಏನು ಮಾಡಿದರೂ ನಡೆಯುತ್ತದೆ ಎಂದು ಪದೇಪದೆ ಇದೇ ರೀತಿ ಕೃತ್ಯಕ್ಕೆ ಮುಂದಾಗುತ್ತಾರೆ. ಹೀಗಾಗಿ, ಈ ರೀತಿಯ ಕೃತ್ಯಗಳನ್ನು ಮಾಡಿ ಸಿಕ್ಕಿಬಿದ್ದ ತಕ್ಷಣವೇ ಕಠಿಣ ಶಿಕ್ಷೆ ವಿಧಿಸುವ ರೀತಿ ಕಾನೂನು ಜಾರಿ ಮಾಡಬೇಕಿದೆ ಎಂದು ವಕೀಲ ಬಾಲ ಸುಬ್ರಹ್ಮಣ್ಯ ಹೇಳಿದ್ದಾರೆ. ಬೆಳಗ್ಗೆ ಎದ್ದು ಸಿಮೆಂಟ್ ಕೆಲಸ ಮಾಡಿ ನಾಲ್ಕು ಕಾಸು ಸಂಪಾದನೆ ಮಾಡಿದ್ದ ಕೂಲಿ ಕಾರ್ಮಿಕನಿಗೆ ಮೋಸ ಮಾಡಿದ ಕಳ್ಳ ಈಗ ಪೊಲೀಸರ ಅತಿಥಿಯಾಗಿದ್ದಾನೆ. ಇನ್ನಾದರೂ ಜನಸಾಮಾನ್ಯರು ತಮ್ಮ ದಾಖಲೆಗಳನ್ನು ಕೊಡುವ ಮೊದಲು ಜಾಗರೂಕರಾಗಿರಬೇಕಿದೆ.
ಇದನ್ನೂ ಓದಿ: 1 ಕೋಟಿ ರೂ.ಗಳ ಗಿಫ್ಟ್ ಆಸೆಗೆ 15 ಲಕ್ಷ ಕಳೆದುಕೊಂಡ ಮಹಿಳೆ: ಇನ್ಸ್ಟಾ ಗೆಳೆಯನಿಂದ ಮಹಾ ಮೋಸ!