ಚಿಕ್ಕಬಳ್ಳಾಪುರ : ಹಿಂದೂ-ಮುಸ್ಲಿಮರ ಭಾವೈಕ್ಯತೆಯ ಕೇಂದ್ರ ಹಾಗೂ ಪವಿತ್ರ ಯಾತ್ರಾ ಸ್ಥಳವಾದ ಜಿಲ್ಲೆಯ ಚಿಂತಾಮಣಿ ತಾಲೂಕಿನ ಮುರಗಮಲ್ಲಾ ಗ್ರಾಮದ ಹಜರತ್ ಅಮ್ಮಾಜಾನ್ ಬಾವಾಜಾನ್ ದರ್ಗಾ ಹುಂಡಿ ಎಣಿಕೆ ಕಾರ್ಯ ನಡೆದಿದೆ. ಕೊರೊನಾ ನಡುವೆಯೂ 20 ಲಕ್ಷ ರೂ. ಹಣ ಸಂಗ್ರಹವಾಗಿದೆ.
ಕಳೆದ 1 ವರ್ಷದ ಹಿಂದೆ ನಡೆದ ಹುಂಡಿ ಎಣಿಕೆ ಕಾರ್ಯದಲ್ಲಿ ₹29.36 ಲಕ್ಷ ಹಣ ಸಂಗ್ರಹವಾಗಿತ್ತು. ಆದ್ರೆ, ಲಾಕ್ಡೌನ್ ಘೋಷಣೆಯಾದ ನಂತರ ದರ್ಗಾ ಬಾಗಿಲು 4 ತಿಂಗಳಿಗೂ ಅಧಿಕ ಬಂದ್ ಮಾಡಲಾಗಿತ್ತು. ಸದ್ಯ ಲಾಕ್ಡೌನ್ ನಡುವೆಯೂ ದರ್ಗಾದ ಹಣ ದಾಖಲೆ ಮೊತ್ತದಲ್ಲಿ ಸಂಗ್ರಹವಾಗಿದೆ.
ಇಂದು ದರ್ಗಾ ಹುಂಡಿ ಎಣಿಕೆ ಕಾರ್ಯಕ್ರಮವನ್ನು ಚಿಕ್ಕಬಳ್ಳಾಪುರ ಜಿಲ್ಲಾ ವಕ್ಫ್ ಬೋರ್ಡ್ನ ಅಧಿಕಾರಿ ಸಿರಾಜ್ ಅಹ್ಮದ್ ನೇತೃತ್ವದಲ್ಲಿ ನಡೆಸಲಾಯಿತು. ಹುಂಡಿ ಎಣಿಕೆ ಕಾರ್ಯಕ್ರಮದಲ್ಲಿ 20,37,505 ಹಣ ಸಂಗ್ರಹವಾಗಿದೆ.
ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ವಕ್ಫ್ ಬೋರ್ಡ್ ಅಧಿಕಾರಿ, ಹಂತ ಹಂತದಲ್ಲಿ ದರ್ಗಾಗೆ ಮೂಲಸೌಕರ್ಯ ಕಲ್ಪಿಸಿ ಭಕ್ತಾದಿಗಳಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ನೋಡಿಕೊಳ್ಳಲಾಗುವುದು ಎಂದು ಭರವಸೆ ನೀಡಿದರು.