ಗೌರಿಬಿದನೂರು: ತಾಲೂಕಿನ ಇತಿಹಾಸ ದೇಗುಲಗಳಲ್ಲಿ ಒಂದಾದ ಮುದುಗಾನಕುಂಟೆಯ ಶ್ರೀಗಂಗಮ್ಮ ದೇಗುಲದ ರಸ್ತೆಯ ನಡು ಬೀದಿಯಲ್ಲೇ ಭಕ್ತರ ಮುಡಿ ತೆಗೆಯುತ್ತಿದ್ದು, ಈ ಕಾರ್ಯ ಸಾರ್ವಜನಿಕ ಹಾಗೂ ಭಕ್ತರ ಟೀಕೆಗೆ ಗುರಿಯಾಗಿದೆ.
ಪ್ರತಿ ಸೋಮವಾರ ರಾಜ್ಯ ಹಾಗೂ ಜಿಲ್ಲೆಯ ವಿವಿಧ ಭಾಗಗಳಿಂದ ನಾನಾ ಹರಕೆಗಳನ್ನ ಹೊತ್ತ ಭಕ್ತರು ಮುಂಜಾನೆಯೇ ದೇವಸ್ಥಾನಕ್ಕೆ ಭೇಟಿ ನೀಡುತ್ತಾರೆ. ಅದರಲ್ಲಿ ಮುಡಿ ತೆಗೆಸುವ ಹರಿಕೆ ಹೊತ್ತವರ ಸಂಖ್ಯೆಯೇ ಹೆಚ್ಚಾಗಿರುತ್ತದೆ. ಇನ್ನೂ ಮುಡಿ ತಗೆಸುವದರಲ್ಲಿ ಮಹಿಳೆಯರು, ಮಕ್ಕಳು, ಪುರುಷರು ಎನ್ನದೇ ವಯಸ್ಕರು ಕೂಡಾ ಮುಡಿ ಕೊಟ್ಟು ದೇವಿ ಗಂಗಮ್ಮ ಪೂಜಾ ಕೈಂಕರ್ಯಕ್ಕೆ ಮುಂದಾಗುತ್ತಾರೆ.
ಇನ್ನು ದೇವಸ್ಥಾನ ಜಿಲ್ಲೆಯಲ್ಲಿ ಅಲ್ಲದೇ ನೆರೆರಾಜ್ಯಗಳಲ್ಲಿಯೂ ಹೆಸರುವಾಸಿ. ಈ ದೇವಾಲಯಕ್ಕೆ ಭಕ್ತರಿಂದ ದೇಣಿಗೆ ರೂಪದಲ್ಲಿ ಲಕ್ಷ ಲಕ್ಷ ಹಣ ಸಂಗ್ರಹವಾಗುತ್ತದೆ. ಈ ಹಣ ಹುಂಡಿಯಿಂದ ಮುಜರಾಯಿ ಇಲಾಖೆಗೆ ತಲುಪುತ್ತದೆ. ದೇಗುಲದ ಅಭಿವೃದ್ಧಿಯ ಜವಾಬ್ದಾರಿ ನಿರ್ವಹಿಸುತ್ತಿರುವ ತಾಲೂಕು ದಂಡಾಧಿಕಾರಿಗಳು ಹಾಗೂ ದೇವಾಲಯದ ನಿರ್ವಹಣಾಧಿಕಾರಿಗಳು ಹಣ ಸಂಗ್ರಹಕ್ಕೆ ಮಾತ್ರ ತಮ್ಮ ಧ್ಯೇಯ ಎನ್ನುವ ಹಾಗೆ ಕನಿಷ್ಠ ಮೂಲ ಸೌಲಭ್ಯಗಳನ್ನು ಭಕ್ತರಿಗೆ ಕಲ್ಪಿಸದೇ ಬೇಜವಾಬ್ದಾರಿಯನ್ನು ಪ್ರದರ್ಶಿಸುತ್ತಿದ್ದು, ಭಕ್ತರು ಆಕ್ರೋಶಕ್ಕೆ ಕಾರಣವಾಗಿದೆ.
ಇನ್ನೂ ಎಲ್ಲಕ್ಕಿಂತ ಮುಖ್ಯವಾಗಿ ಭಕ್ತರು ನಡು ಬೀದಿಯಲ್ಲೇ ಹರಕೆ ಮುಡಿ ನೀಡುವ ಕಾರ್ಯ ನಡೆಯುತ್ತಿರುವುದು ಆಡಳಿತ ಮಂಡಳಿಯ ಹಾಗೂ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಕನ್ನಡಿಯಾದಂತಿದೆ. ಈಗಲಾದರೂ ರಾಜ್ಯ ಮುಜರಾಯಿ ಇಲಾಖೆ ಆಯುಕ್ತರು ತಕ್ಷಣ ಇತ್ತ ಗಮನಹರಿಸಬೇಕಿದೆ.