ಚಿಕ್ಕಬಳ್ಳಾಪುರ: ನನ್ನ ವಿರುದ್ಧ ಎಂಟಿಬಿ ನಾಗರಾಜ್ ನೀಡಿರುವ ದೂರಿಗೆ ನಾನು ಯಾವುದೇ ಕಾರಣಕ್ಕೂ ಹೆದರುವುದಿಲ್ಲ. ಎಂಟಿಬಿ ದೂರನ್ನ ನಾನು ಲೆಕ್ಕಕ್ಕೇ ಇಡಲ್ಲ. ಅದಕ್ಕೆಲ್ಲ ಕೇರ್ ಮಾಡಲ್ಲ ಎಂದು ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಸಂಸದ ಬಿ.ಎನ್ ಬಚ್ಚೇಗೌಡ ತಿರುಗೇಟು ನೀಡಿದ್ದಾರೆ.
ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಭವನದಲ್ಲಿ ನಡೆದ ದಿಶಾ ಸಭೆಯ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಸಂಸದ ಬಚ್ಚೇಗೌಡ, ಎಂಟಿಬಿ ನಾಗರಾಜ್ ತಮ್ಮ ವಿರುದ್ಧ ಸಿಎಂಗೆ ದೂರು ಕೊಟ್ಟಿರುವ ಕುರಿತು ಕೇಳಿದ ಪ್ರಶ್ನೆಗೆ ಖಡಕ್ ಆಗಿ ಪ್ರತಿಕ್ರಿಯಿಸಿದರು. ದೂರು ಕೊಟ್ಟರೆ ಕೊಡಲಿ, ಅದಕ್ಕೆಲ್ಲ ಹೆದರಲ್ಲ, ನನ್ನ ಕೆಲಸ ನಾನು ಮಾಡಿಕೊಂಡು ಹೋಗುತ್ತೇನೆ. ಹಿಂದಿನಿಂದಲೂ ನಾನು ರಾಜಕಾರಣ ಮಾಡಿಕೊಂಡು ಬಂದವನು. ನಾನು ರಾಜಕೀಯಕ್ಕೆ ಹೊಸಬನಲ್ಲ,ಇಂತಹ ದೂರುಗಳನ್ನ ಲೆಕ್ಕಕ್ಕೇ ಇಡಲ್ಲ ಮತ್ತು ಕೇರ್ ಮಾಡಲ್ಲ ಎಂದು ಮಾತಿನ ಚಾಟಿ ಬೀಸಿದರು.