ಚಿಕ್ಕಬಳ್ಳಾಪುರ: ನಾಯಿಗಳಿಂದ ತಪ್ಪಿಸಿಕೊಳ್ಳುವ ಭರದಲ್ಲಿ 80ಕ್ಕೂ ಹೆಚ್ಚು ಕುರಿಗಳು ಚಲಿಸುತ್ತಿದ್ದ ರೈಲಿಗೆ ಸಿಲುಕಿ ಸಾವನ್ನಪ್ಪಿರುವ ಘಟನೆ ಶಿಡ್ಲಘಟ್ಟ ತಾಲೂಕಿನ ಲಕ್ಕಹಳ್ಳಿ ಗ್ರಾಮದ ಬಳಿ ನಡೆದಿದೆ. ಚಿಕ್ಕಬಳ್ಳಾಪುರ ದಿಂದ ಕೋಲಾರಕ್ಕೆ ಚಲಿಸುತ್ತಿದ್ದ ರೈಲಿಗೆ ಸಿಲುಕಿ ಈ ದುರ್ಘಟನೆ ನಡೆದಿದೆ. ಹುಸಹುಡ್ಯಾ ನಿವಾಸಿಗಳಾದ ಆಂಜಿನಪ್ಪ, ಮುನಿನಾರಾಯಣ ಹಾಗೂ ದೇವರಾಜ್ ಅವರುಗಳಿಗೆ ಸೇರಿದ ಕುರಿಗಳು ಇವಾಗಿವೆ. ಸ್ಥಳಕ್ಕೆ ರೈಲ್ವೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಕುರಿಗಳ ಮಾಲೀಕ ಆಂಜಿನಪ್ಪ ಮಾತನಾಡಿ, "ರೈಲ್ವೆ ಟ್ರ್ಯಾಕ್ ಬಳಿ ಕುರಿಗಳನ್ನು ಮೇಯಿಸುತ್ತಿದ್ದಾಗ ನಾಯಿಗಳು ಕುರಿ ಹಿಂಡಿನ ಮೇಲೆ ದಾಳಿ ಮಾಡಿವೆ. ಇದರಿಂದ ಬೆದರಿದ ಕುರಿಗಳು ತಪ್ಪಿಸಿಕೊಳ್ಳಲು ಹಳಿಯತ್ತ ನುಗ್ಗಿವೆ. ಇದೇ ಸಮಯಕ್ಕೆ ಬಂದ ರೈಲು ಕುರಿಗಳ ಮೇಲೆ ಹರಿದಿದೆ. ಇದರಿಂದ ಕುರಿಗಳು ಸ್ಥಳದಲ್ಲೇ ಸಾವನ್ನಪ್ಪಿವೆ. ನಾವು ಕುರಿಗಳನ್ನೇ ನಂಬಿಕೊಂಡು ಜೀವನ ಮಾಡುತ್ತಿದ್ದೆವು. ಒಬ್ಬೊಬ್ಬ ಕುರಿ ಮಾಲೀಕನಿಗೂ ಸುಮಾರು 5 ಲಕ್ಷ ರೂಪಾಯಿ ನಷ್ಟ ಉಂಟಾಗಿದೆ" ಎಂದು ಹೇಳಿದರು.
ಸಹಾಯಕ ನಿರ್ದೇಶಕ ಡಾ ಜ್ಞಾನೇಶ್ ಮಾತನಾಡಿ, "ಶುಕ್ರವಾರ ಸುಮಾರು 11.30 ಗಂಟೆಗೆ ರೈಲ್ವೆ ಟ್ರ್ಯಾಕ್ ಬಳಿಯ ಜಮೀನಿನಲ್ಲಿ ಕುರಿಗಳು ಮೇಯುತ್ತಿದ್ದಾಗ, ನಾಯಿಗಳು ಕುರಿ ಹಿಂಡಿನ ಮೇಲೆ ದಾಳಿ ಮಾಡಿವೆ. ಈ ವೇಳೆ, ಚಿಕ್ಕಬಳ್ಳಾಪುರ ದಿಂದ ಕೋಲಾರಕ್ಕೆ ಚಲಿಸುತ್ತಿದ್ದ ರೈಲು ಕುರಿಗಳ ಮೇಲೆ ಹರಿದಿದೆ. ಸುಮಾರು 68 ಕುರಿಗಳು ಸಾವನ್ನಪ್ಪಿರುವುದನ್ನು ನಮಗೆ ಕಂಡು ಬಂದಿದೆ. ಈ ಮೃತ ಕುರಿಗಳು ಮೂರು ಜನ ರೈತರಿಗೆ ಸೇರಿದವುಗಳಾಗಿವೆ. ಈ ಸಂಬಂಧ ಚಿಕ್ಕಬಳ್ಳಾಪುರ ರೈಲ್ವೆ ಅಧಿಕಾರಿಗಳಿಗೆ ತಿಳಿಸಿ ಕ್ರಮ ಕೈಗೊಂಡಿದ್ದೇವೆ. ಸರ್ಕಾರದಿಂದ ಪ್ರತಿ ಕುರಿಗೆ 5 ಸಾವಿರ ಪರಿಹಾರ ಕೊಡುವ ಬಗ್ಗೆ ಕ್ರಮ ತೆಗೆದುಕೊಳ್ಳುತ್ತಿದ್ದೇವೆ" ಎಂದು ತಿಳಿಸಿದರು.
ಇದನ್ನೂ ಓದಿ: ವಿಜಯಪುರ: ಮಳೆ ಹಿನ್ನೆಲೆ ಬ್ರಿಡ್ಜ್ ಕೆಳಗೆ ನಿಂತಿದ್ದ 40ಕ್ಕೂ ಹೆಚ್ಚು ಕುರಿಗಳ ಮೇಲೆ ಹರಿದ ರೈಲು
ಸಿಡಿಲು ಬಡಿತಕ್ಕೆ 8 ಹಸು, 4 ಕುರಿಗಳು ಸಾವು(ಚಾಮರಾಜನಗರ): ಇತ್ತೀಚಿಗೆ, ಸಿಡಿಲಿನ ಬಡಿತಕ್ಕೆ 8 ಹಸು, 4 ಕುರಿಗಳು ಮೃತಪಟ್ಟಿದ್ದ ಘಟನೆ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಕುಂದಕೆರೆ ಗ್ರಾಮದಲ್ಲಿ ನಡೆದಿತ್ತು. ಕುಂದಕೆರೆ ಗ್ರಾಮದ ರಾಜು ಹಾಗೂ ಸಣ್ಣಮಲ್ಲಪ್ಪ ಎಂಬವರಿಗೆ ಸೇರಿದ ಜಾನುವಾರುಗಳು ಇವಾಗಿದ್ದವು. ಮೇಯಲು ಬಿಟ್ಟಿದ್ದ ವೇಳೆ ಭಾರೀ ಪ್ರಮಾಣದಲ್ಲಿ ಸುರಿದ ಸಿಡಿಲು ಸಹಿತ ಮಳೆಗೆ ಸಿಲುಕಿ ಮೃತಪಟ್ಟಿವೆ ಎಂದು ಮಾಲೀಕ ಸಣ್ಣಮಲ್ಲಪ್ಪ ನೋವು ತೋಡಿಕೊಂಡಿದ್ದರು. ಸ್ಥಳಕ್ಕೆ ಗ್ರಾಪಂ ಅಧಿಕಾರಿಗಳು ಹಾಗೂ ಪೊಲೀಸರು ಭೇಟಿ ಪರಿಶೀಲಿಸಿದ್ದರು.