ಚಿಕ್ಕಬಳ್ಳಾಪುರ/ಬಾಗೇಪಲ್ಲಿ: ಪಟ್ಟಣದಲ್ಲಿ ಸುರಿದ ಭಾರೀ ಮಳೆಗೆ ಶಾರ್ಟ್ ಸರ್ಕ್ಯೂಟ್ನಿಂದ ಉಂಟಾದ ಅಗ್ನಿ ಅವಘಡದಲ್ಲಿ ಅಂಗಡಿಯಲ್ಲಿಟ್ಟಿದ್ದ ಕಂತೆ ಕಂತೆ ಹಣ ಬೆಂಕಿಯಲ್ಲಿ ಸುಟ್ಟು ಕರಕಲಾದ ಘಟನೆ ಪಟ್ಟಣದ ಡಿವಿಜಿ ಮುಖ್ಯರಸ್ತೆಯಲ್ಲಿರುವ ಬಾಲಾಜಿ ಪ್ರಾವಿಜನ್ ಸ್ಟೋರ್‌ನಲ್ಲಿ ನಡೆದಿದೆ.
ಬೆಂಕಿಯಿಂದಾಗಿ ಮಳಿಗೆಯಲ್ಲಿದ್ದ ಕಂಪ್ಯೂಟರ್ ಮತ್ತು ಕರೆನ್ಸಿ ಎಣಿಕೆ ಯಂತ್ರದ ಜತೆಗೆ ಅಂಗಡಿಯಲ್ಲಿರುವ ,ಆಹಾರ ಸಾಮಗ್ರಿಗಳು,ಇತರೆ ಸರಕುಗಳೂ ಬಹುತೇಕ ಸುಟ್ಟು ಭಸ್ಮವಾಗಿವೆ. 500 ರೂ. ಮುಖಬೆಲೆ ಹಣದ ಕಂತೆಗಳು ಬೆಂಕಿಯಲ್ಲಿ ಬಹುತೇಕ ಬೆಂದು ಹೋಗಿವೆ. ಒಟ್ಟಾರೆ 10 ರಿಂದ 15 ಲಕ್ಷ ರೂ ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ. ಬಾಗೇಪಲ್ಲಿ ಪಟ್ಟಣದ ಅತಿದೊಡ್ಡ ಸಗಟು ಮಾರಾಟ ಮಳಿಗೆಗಳಲ್ಲಿ ಬಾಲಾಜಿ ಪ್ರಾವಿಜನ್ ಸ್ಟೋರ್ ಸಹ ಒಂದಾಗಿದ್ದು, ದಿನಕ್ಕೆ ಲಕ್ಷಾಂತರ ರೂ. ವ್ಯವಹಾರ ನಡೆಯುತ್ತದೆ.
ಅಗ್ನಿಶಾಮಕ ಸಿಬ್ಬಂದಿಗೆ ಗಾಯ:
ಬೆಂಕಿ ನಂದಿಸುವ ಕಾರ್ಯಾಚರಣೆ ವೇಳೆ ಅಗ್ನಿಶಾಮಕ ಸಿಬ್ಬಂದಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಸಿಬ್ಬಂದಿಯಾದ ನಾರಾಯಣಸ್ವಾಮಿ ಅವರ ಮೇಲೆ ಮೇಲ್ಛಾವಣಿಯ ಪಿಓಪಿ ಬಿದ್ದು ಅವರಿಗೆ ಸಣ್ಣಪುಟ್ಟ ಗಾಯವಾದರೆ, ಜಯಪ್ಪ ನಾಯಕ್ ಎಂಬುವವರ ಬೆರಳಿಗೆ ಮೊಳೆ ಚುಚ್ಚಿ ರಕ್ತಸ್ರಾವವಾಗಿದೆ. ಇದ್ಯಾವುದನ್ನೂ ಲೆಕ್ಕಿಸದೆ ಬೆಂಕಿ ನಂದಿಸುವಲ್ಲಿ ಅಗ್ನಿಶಾಮಕ ಸಿಬ್ಬಂದಿ ಯಶಸ್ವಿಯಾಗಿದ್ದಾರೆ.