ಬಾಗೇಪಲ್ಲಿ (ಚಿಕ್ಕಬಳ್ಳಾಪುರ): ತಾಲೂಕಿನ ಮಿಟ್ಟೇಮರಿ ಹೋಬಳಿ ಜೂಲಪಾಳ್ಯ ಗ್ರಾಮ ಪಂಚಾಯತಿ ವ್ಯಾಪ್ತಿಯ ಬೊಡೆಕದಿರೇಪಲ್ಲಿ ಗ್ರಾಮದ ಅರ್ಹ ಫಲಾನುಭವಿಗಳಿಗೆ ಶಾಸಕ ಎಸ್.ಎನ್. ಸುಬ್ಬಾರೆಡ್ಡಿ ಅವರು ನಿವೇಶನ ಹಕ್ಕು ಪತ್ರಗಳನ್ನು ವಿತರಿಸಿದರು.
ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ತಾಲೂಕಿನ ಜೂಲಪಾಳ್ಯ ವ್ಯಾಪ್ತಿಯ ಬೊಡಿಕದಿರೆಪಲ್ಲಿ ಗ್ರಾಮದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ 29 ಹಾಗೂ ಸಾಮಾನ್ಯ ಜನರಿಗೆ 14 ಸೇರಿದಂತೆ 43 ಮಂದಿಗೆ ಆಶ್ರಯ ಯೋಜನೆ ಅಡಿಯಲ್ಲಿ ನಿವೇಶನ ಹಕ್ಕು ಪತ್ರ ವಿತರಿಸಿದರು. ಬಳಿಕ ಮಾತನಾಡಿದ ಅವರು, ಸರ್ಕಾರದ ಯೋಜನೆಗಳು ಇಂದಿಗೂ ಬಡವರಿಗೆ ಸಿಗುತ್ತಿಲ್ಲ. ಕೆಲವರಿಗೆ ನಿವೇಶನ, ಮನೆ ಇಲ್ಲದೇ ಗುಡಿಸಲುಗಳಲ್ಲಿ ವಾಸ ಮಾಡುತ್ತಿದ್ದಾರೆ. ತಾಲೂಕಿನಲ್ಲಿ ಇದುವರೆಗೂ ಅರ್ಜಿ ಸಲ್ಲಿಸಿರುವ ಅರ್ಹ ನಿವೇಶನ ರಹಿತರಿಗೆ ನಿವೇಶನ, ಮನೆ ನಿರ್ಮಿಸಿಕೊಡುವುದಾಗಿ ತಿಳಿಸಿದರು.
ನಿವೇಶನ ಹಕ್ಕು ಪತ್ರ ಪಡೆಯಲು ಯಾರೂ ಕೂಡ 10 ಪೈಸೆಯನ್ನೂ ಅಧಿಕಾರಿಗಳಿಗೆ ಕೊಡಬೇಡಿ. ಅದೇ ರೀತಿ ಅಧಿಕಾರಿಗಳು ಕೂಡ ಬಡವರ ಕೈಯಿಂದ ಹಣ ಪಡೆಯಬೇಡಿ ಎಂದರು.