ಚಿಕ್ಕಬಳ್ಳಾಪುರ : ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಡಿ.ಮಾರಪ್ಪ ನಿಧನಕ್ಕೆ ಆರೋಗ್ಯ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಡಾ.ಕೆ.ಸುಧಾಕರ್, ಜಿಲ್ಲಾಧಿಕಾರಿ,ವರಿಷ್ಠಾಧಿಕಾರಿ ಸಂತಾಪ ಸೂಚಿಸಿದ್ದಾರೆ.
ತಾಲೂಕಿನ ಕೊಳವನಹಳ್ಳಿಯಲ್ಲಿರುವ ಮೃತರ ನಿವಾಸಕ್ಕೆ ಭೇಟಿ ನೀಡಿದ ಸಚಿವರು, ಮಾರಪ್ಪನವರ ಅಂತಿಮ ದರ್ಶನ ಪಡೆದು ನಮನ ಸಲ್ಲಿಸಿದರು. ಇದೇ ವೇಳೆ ಜಿಲ್ಲಾಧಿಕಾರಿ ಆರ್ ಲತಾ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ ಕೆ ಮಿಥುನ್ ಕುಮಾರ್, ಕರ್ನಾಟಕ ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮದ ಅಧ್ಯಕ್ಷ ಕೆ.ವಿ.ನಾಗರಾಜು ಮತ್ತಿತರರು ಕೂಡ ಸಂತಾಪ ಸೂಚಿಸಿ ಗೌರವ ಸಮರ್ಪಣೆ ಮಾಡಿದರು.
ಮಾರಪ್ಪ(93)ನವರು ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು. ಇವರು ಮೂಲತಃ ಶಿಡ್ಲಘಟ್ಟ ತಾಲೂಕಿನ ಭಕ್ತರಹಳ್ಳಿಯವರು. ಗಾಂಧಿವಾದಿಯಾಗಿದ್ದ ಡಿ.ಮಾರಪ್ಪನವರು ಸ್ವಾತಂತ್ರ್ಯ ಚಳವಳಿಯಲ್ಲಿ ಭಾಗವಹಿಸಿ ಜೈಲುವಾಸ ಅನುಭವಿಸಿದ್ದರು. ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಉನ್ನತ ಶಿಕ್ಷಣ ಪೂರೈಸಿದ್ದಾರೆ. ಬಿಎ, ಬಿಇಡಿ ಪದವೀಧರಾಗಿದ್ದರು.
ವಿದ್ಯಾರ್ಥಿ ಜೀವನದಲ್ಲಿ ಒಂದಲ್ಲ ಒಂದು ಕ್ರಿಯಾತ್ಮಕ ಹಾಗೂ ಸಂಘಟಿತ ಚಟುವಟಿಕೆಯಲ್ಲಿ ಪ್ರಮುಖ ಪಾತ್ರವಹಿಸಿದ್ದ ಮಾರಪ್ಪನವರು, ಅನೇಕ ದೇಶ ಭಕ್ತರು, ರಾಷ್ಟ್ರ ನಾಯಕರ ಸಂಪರ್ಕ ಪಡೆದಿದ್ದರು. ಚಿಕ್ಕ ವಯಸ್ಸಿನಲ್ಲೇ ಲೋಕನಾಯಕ ಜಯಪ್ರಕಾಶ್ ನಾರಾಯಣ, ಡಾ.ರಾಮ ಮನೋಹರ ಲೋಹಿಯಾ, ಅಶೋಕ್ ಮೆಹ್ತಾ ಮತ್ತಿತರಿಂದ ಪ್ರಭಾವಿತರಾಗಿದ್ದರು.
ಕರ್ನಾಟಕದ ಹಲವು ಮಂದಿ ಗಾಂಧಿವಾದಿಗಳಲ್ಲಿ ಇವರು ಪ್ರಮುಖರು. ಅಂದಿನ ದಿನಗಳಲ್ಲೇ ಸಮಾಜವಾದದ ಪತಾಕೆ ಎತ್ತಿ ಹಿಡಿದಿದ್ದ ಇವರು, ಕೋಲಾರದಲ್ಲಿ ವಿದ್ಯಾರ್ಥಿ ಸಮಾಜವಾದಿ ಕೂಟ ಸ್ಥಾಪಿಸಿದ್ದರು. ಆ ಮೂಲಕ ಸಮಾಜವಾದಿ ವಿದ್ಯಾರ್ಥಿ ನಿಲಯ ಸ್ಥಾಪನೆಯಲ್ಲಿ ಮುಂಚೂಣಿಯಲ್ಲಿದ್ದರು.