ಚಿಕ್ಕಬಳ್ಳಾಪುರ: ಪೊಲೀಸ್ ಅಧಿಕಾರಿ ನಂದೀಶ್ ಪ್ರಕರಣದ ಬಗ್ಗೆ ಸರ್ಕಾರ ತನಿಖೆಯನ್ನು ನಡೆಸುತ್ತಿದೆ. ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ. ಬೇಕಾದ್ರೆ ನನ್ನನ್ನು ಸೇರಿಸಿ ತನಿಖೆ ನಡೆಸಲಿ ಎಂದು ಚಿಕ್ಕಬಳ್ಳಾಪುರ ಜಿಲ್ಲಾ ಉಸ್ತುವಾರಿ ಸಚಿವ ಎಂಟಿಬಿ ನಾಗರಾಜ್ ಹೇಳಿದ್ದಾರೆ.
ನಗರದ ವಿಶ್ವೇಶ್ವರಯ್ಯ ಕ್ರೀಡಾಂಣದಲ್ಲಿಂದು ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪಿಎಸ್ಐ ಹಗರಣದ ಬಗ್ಗೆ ಸತ್ಯಾಸತ್ಯತೆ ಹೇಳಿದ್ದೇನೆ. ನಾನು ಸುಳ್ಳು ಹೇಳುವುದಿಲ್ಲಾ, ಮುಚ್ಚುಮರೆಯಿಲ್ಲದೆ ಎಲ್ಲದರ ಬಗ್ಗೆ ಸತ್ಯ ಹೇಳಿದ್ದೇನೆ. ಬಿಜೆಪಿ ಸರ್ಕಾರದ ಅವಧಿಯಲ್ಲಿ ಯಾವ ಇಲಾಖೆಯಲ್ಲಿ ಯಾವ ಹಗರಣವೂ ನಡೆದಿಲ್ಲಾ. ನಮ್ಮ ಸರ್ಕಾರ ಪ್ರಾಮಾಣಿಕ, ಪಾರದರ್ಶಕ, ದಕ್ಷತೆಯಿಂದ ಆಡಳಿತ ನಡೆಸುತ್ತಿದೆ ಎಂದರು.
ಹೃದಯಾಘಾತದಿಂದ ಸಾವನ್ನಪ್ಪಿರುವ ಪೊಲೀಸ್ ಅಧಿಕಾರಿ ಬಗ್ಗೆ ಮಾತಾನಾಡಿರುವೆ, ಅದರಲ್ಲಿ ಯಾವುದೇ ತಪ್ಪಾಗಿ ಮಾತನಾಡಿಲ್ಲ. ವಿರೋಧ ಪಕ್ಷದ ನಾಯಕರು ರಾಜೀನಾಮೆ ಕೊಡಬೇಕು ಎನ್ನುತ್ತಿದ್ದಾರೆ. ಆದರೆ ರಾಜೀನಾಮೆ ಯಾಕೆ ಕೊಡಬೇಕು?. ಮುಖ್ಯಮಂತ್ರಿಗಳು ಪ್ರಕರಣದ ತನಿಖೆ ನಡೆಸಲು ಸೂಚಿಸಿದ್ದಾರೆ. ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ. ತನಿಖೆ ನಡೆಸುವ ವೇಳೆ ನನ್ನನ್ನು ಸೇರಿಸಿ ತನಿಖೆ ನಡೆಸಲಿ. ಈಗಾಗಲೇ ಸಾಕಷ್ಟು ಅಧಿಕಾರಿಗಳು ಹಗರಣದಲ್ಲಿ ಭಾಗಿಯಾಗಿ ಜೈಲಿನಲ್ಲಿದ್ದಾರೆ. ಈ ಕುರಿತು ಮತ್ತಷ್ಟು ಸಮಗ್ರ ತನಿಖೆ ನಡೆಯಲಿದೆ. ನ್ಯಾಯಾಲಯ ತೀರ್ಪಿಗೆ ಎಲ್ಲರೂ ತಲೆ ಬಾಗಬೇಕಾಗಿದೆ ಎಂದರು.
ಬಳಿಕ ಗುತ್ತಿಗೆ ಪೌರಕಾರ್ಮಿಕರ ವಿಚಾರಕ್ಕೆ ಮಾತನಾಡಿ, ಸಚಿವ ಸಂಪುಟದಲ್ಲಿ 11,600 ಪೌರ ಕಾರ್ಮಿಕರಿಗೆ ಪರ್ಮನೆಂಟ್ ಮಾಡಲಾಗಿದೆ. ರಾಜ್ಯದಲ್ಲಿ ಇನ್ನೂ 4,600 ಪೌರಕಾರ್ಮಿಕರು ಹೊರಗುತ್ತಿಗೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಈಗಾಗಲೇ ಮುಖ್ಯಮಂತ್ರಿಗಳ ಜೊತೆಯಲ್ಲಿ ಚರ್ಚೆ ನಡೆಸಲಾಗಿದೆ. ಹೊರಗುತ್ತಿಗೆ ಆಧಾರದ ಪೌರಕಾರ್ಮಿಕರನ್ನು ನೇರಪಾವತಿಗೆ ತಗೆದುಕೊಳ್ಳಲು ಸಭೆ ನಡೆಸಲಾಗಿದ್ದು, ಹೆಚ್ಚುವರಿಯಾಗಿ 5 ಸಾವಿರ ಹೆಚ್ಚುವರಿ ಸ್ಯಾಲರಿ ಬರಲಿದೆ. ಸದ್ಯ ಸರ್ಕಾರದ ಆರ್ಥಿಕ ಇಲಾಖೆಯ ಒಪ್ಪಿಗೆಗೆ ಕಳುಹಿಸಲಾಗಿದ್ದು, ಇನ್ನೂ ಕೆಲವೇ ದಿನಗಳಲ್ಲಿ ಅವರನ್ನು ಸಹಾ ನೇರ ಪಾವತಿ ಮಾಡಲು ತೀರ್ಮಾನ ಆಗಲಿದೆ. ಪೌರ ಕಾರ್ಮಿಕರನ್ನು ನಮ್ಮ ಸರ್ಕಾರದಲ್ಲಿ ಕಾಯಂಗೊಳಿಸಲು ಶ್ರಮ ವಹಿಸುತ್ತಿದ್ದೇವೆ ಎಂದು ಸ್ಪಷ್ಟಪಡಿಸಿದರು.
ಕೆಂಪೇಗೌಡ ಪ್ರತಿಮೆ ಅನಾವರಣ ಬಿಜೆಪಿ ಕಾರ್ಯಕ್ರಮ ಎಂಬ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಇದು ಸರ್ಕಾರಿ ಕಾರ್ಯಕ್ರಮ ಎಂದು ಈಗಾಗಲೇ ಸ್ಪಷ್ಟಪಡಿಸಲಾಗಿದ್ದು, ಪಕ್ಷಾತೀತ ಜಾತ್ಯತೀತವಾಗಿ ಎಲ್ಲರಿಗೂ ಆಹ್ವಾನ ನೀಡಲಾಗಿದೆ. ರಥಯಾತ್ರೆ ಮೂಲಕ ಎಲ್ಲಾ ತಾಲೂಕಿಗೂ ಚಾಲನೆ ಕೊಡಲಾಗಿದೆ. ಎಲ್ಲಾ ಸ್ಥಳೀಯ ಶಾಸಕರಿಗೆ ಜಿಲ್ಲಾಡಳಿತ, ತಾಲೂಕು ಆಡಳಿತ ಆಹ್ವಾನ ನೀಡಿದ್ದಾರೆ. ಎಲ್ಲಾ ತಾಲೂಕುಗಳಿಗೂ ರಥಯಾತ್ರೆ ನಡೆಸಲು ಹಸಿರು ನಿಶಾನೆ ಕೊಡಲಾಗಿದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಮಹಾರಾಷ್ಟ್ರದ ಸ್ಟೀಲ್ ಕಾರ್ಖಾನೆಯಲ್ಲಿ ಸ್ಫೋಟ: 8 ರಿಂದ 10 ಜನರ ಸಾವಿನ ಶಂಕೆ